ಮುದ್ದೇಬಿಹಾಳ: ಇಪ್ಪತೈದು ವರ್ಷಗಳಿಂದ ಹಸ್ತಾಂತರವಾಗದೇ ಉಳಿದಿದ್ದ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳ ನಾಲ್ಕು ಸಾವಿರಕ್ಕೂ ಅಧಿಕ ಆಸ್ತಿಗಳು ಮುದ್ದೇಬಿಹಾಳ ಪುರಸಭೆಗೆ ಅಧಿಕೃತವಾಗಿ ಹಸ್ತಾಂತರಗೊಂಡಿದ್ದು, ಈ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ಅಧಿಕಾರಿಗಳು ಮುನ್ನುಡಿ ಬರೆದಿದ್ದಾರೆ.
ತಾಲೂಕಿನ ಬಿದರಕುಂದಿ, ಕವಡಿಮಟ್ಟಿ ಹಾಗೂ ಕುಂಟೋಜಿ ಗ್ರಾಪಂಗಳ ವ್ಯಾಪ್ತಿಯನ್ನು ಒಳಗೊಂಡು ಪಟ್ಟಣದ ವ್ಯಾಪ್ತಿಯಲ್ಲಿ ಬರುವ 4496 ಆಸ್ತಿಗಳನ್ನು ಕೊನೆಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅಧಿಕೃತವಾಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಕಳೆದ ಇಪ್ಪತೈದು ವರ್ಷಗಳಿಂದ ಪಂಚಾಯಿತಿ-ಪುರಸಭೆಯ ವ್ಯಾಪ್ತಿಯಲ್ಲಿ ಸಂಕಟ ಅನುಭವಿಸುತ್ತಿದ್ದ, ಭೂ ಮಾಲೀಕರಿಗೆ ಒಂದು ಕಡೆ ನೆಲೆ ಕಲ್ಪಿಸುವ ಕಾರ್ಯವನ್ನು ಮಾಡಿದ್ದಾರೆ.
ಹಿನ್ನೆಲೆ:
ಪುರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳ ಆಸ್ತಿಗಳನ್ನು1995ರಲ್ಲಿ ಪುರಸಭೆಗೆ ಹಸ್ತಾಂತರಿಸುವಂತೆ ಅಂದಿನ ಸರ್ಕಾರ ಆದೇಶಿಸಿತ್ತು. ಬಳಿಕ ವಿಜಯಪುರ ಜಿಲ್ಲಾಧಿಕಾರಿಗಳು 2010-11ಕ್ಕೆ ಪತ್ರ ಬರೆದು ಪುರಸಭೆಗೆ ಆಸ್ತಿ ಹಸ್ತಾಂತರಿಸಲು ಸೂಚಿಸಿದ್ದರು. ಅದಾದ ಬಳಿಕ ಜಿಪಂ ಸಿಇಓ 2011-12ರಲ್ಲಿ,ಪುನಃ ಜಿಲ್ಲಾಧಿಕಾರಿಗಳು 2020ರಲ್ಲಿ ಪತ್ರ ಬರೆದು ಆಸ್ತಿಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಇಂದಿನ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಹಾಗೂ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಪ್ರತ್ಯೇಕ ಸಭೆ ನಡೆಸಿ, ಆಸ್ತಿಗಳ ಹಸ್ತಾಂತರ ವಿಳಂಬವಾಗುತ್ತಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಇಂದು ಅಧಿಕೃತವಾಗಿ ಆಸ್ತಿಗಳ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ.
ಯಾವ ಪಂಚಾಯಿತಿ, ಎಷ್ಟು ಆಸ್ತಿ:
ಬಿದರಕುಂದಿ ಪಂಚಾಯಿತಿಯ 3093,ಕವಡಿಮಟ್ಟಿಯ199 ಹಾಗೂ ಕುಂಟೋಜಿಯ1204 ಆಸ್ತಿಗಳನ್ನು ಪುರಸಭೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಇನ್ನು ಮುಂದೆ ಉತಾರೆ, ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಪುರಸಭೆಯಲ್ಲಿಯೇ ಲಭ್ಯವಾಗಲಿದ್ದು, ನಗರ ವ್ಯಾಪ್ತಿಯಲ್ಲಿ ಈ ಆಸ್ತಿಗಳಿಗೆ ಅಭಿವೃದ್ಧಿಯ ವೇಗ ದೊರೆಯಲಿದೆ.