ಮುದ್ದೇಬಿಹಾಳ: ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮೂರ್ಛೆ ಹೋಗಿ ಬಿದ್ದು, ತಲೆ ಒಡೆದುಕೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ವೇಳೆ ಪೊಲೀಸರೇ ಸ್ವತಃ ತಮ್ಮ ಜೀಪಿನಲ್ಲಿ ಕೂಡಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಓದಿ: ದೊರೆಸ್ವಾಮಿ ಅಗಲಿಕೆ ತೀವ್ರ ನೋವುಂಟುಮಾಡಿದೆ: ಸಾಲುಮರದ ತಿಮ್ಮಕ್ಕ ಸಂತಾಪ
ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿ ತಾಲೂಕಿನ ಬಿಜ್ಜೂರ ಗ್ರಾಮದ ವ್ಯಕ್ತಿ ಶಿವಪ್ಪ ಚಲವಾದಿ ಎಂಬಾತನಿಗೆ ಫಿಟ್ಸ್ನಿಂದ ರಸ್ತೆಯಲ್ಲಿ ಬಿದ್ದಿದ್ದಾನೆ. ಈ ರಭಸಕ್ಕೆ ಆತನ ತಲೆ ಒಡೆದು ರಕ್ತಸ್ರಾವವಾಗಿದೆ. ಇದನ್ನು ಗಮನಿಸಿ ಸ್ಥಳೀಯರು ತಕ್ಷಣ ಬಸವೇಶ್ವರ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಎ.ಬಿ.ಟಕ್ಕಳಕಿ, ಸಿಬ್ಬಂದಿ ಶಿವಾನಂದ ಮಟ್ಟಿಹಾಳ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಅರುಣ ಪಾಟೀಲ್ ಮೊದಲಾದವರು ಆತನನ್ನು ನಿಲ್ದಾಣದಲ್ಲಿ ಕೆಲಕಾಲ ಕರೆದುಕೊಂಡು ಹೋಗಿ ಕೂಡಿಸಿದರು.
ರಕ್ತಸ್ರಾವ ತಡೆಯುವುದಕ್ಕಾಗಿ ಪಟ್ಟಣದ ಯುವಕರಾದ ಜಾಕೀರ ಬಾಗವಾನ, ಯಮನೂರಿ ಮೇಲಿನಮನಿ ತಮ್ಮಲ್ಲಿದ್ದ ಕರವಸ್ತ್ರವನ್ನೇ ಆತನ ತಲೆಗೆ ಬಿಗಿದು ಕಟ್ಟಿ ರಕ್ತಸ್ರಾವ ನಿಲ್ಲುವಂತೆ ಮಾಡಿದರು. ತಕ್ಷಣ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದು, ಬರುವುದು ವಿಳಂಬವಾಗುತ್ತಿರುವುದನ್ನು ಅರಿತು ಆತನನ್ನು ಪೊಲೀಸ್ ಜೀಪಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಆತನನ್ನು ಮರಳಿ ಊರಿಗೆ ತೆರಳುವಂತೆ ಪೊಲೀಸರು ಸೂಚಿಸಿದರು.