ವಿಜಯಪುರ: ನಗರ ಹೊರವಲಯದ ಬುರುಣಾಪುರ-ಮದಭಾವಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ನನ್ನ ಚಪ್ಪಲಿ ಹರಿಯುವಷ್ಟು ಸುತ್ತಾಡಿದ್ದೇನೆ. ಆದರೆ ಕೆಲವರು ಅದಕ್ಕೂ ಟೀಕೆ ಮಾಡುತ್ತಾರೆ ಎನ್ನುವ ಮೂಲಕ ಸಂಸದ ರಮೇಶ್ ಜಿಗಜಿಣಗಿ ಪರೋಕ್ಷವಾಗಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದರು.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಮುಳವಾಡದಲ್ಲಿ ಮಾಡಬೇಕಾಗಿತ್ತು ಎನ್ನುವ ಅಭಿಪ್ರಾಯಗಳು ಕೆಲ ಸ್ವಪಕ್ಷೀಯ ನಾಯಕರಿಂದ ಕೇಳಿ ಬಂದ ಹಿನ್ನೆಲೆ ಅದಕ್ಕೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ನನ್ನ ಗುರಿಯಾಗಿತ್ತು. ನಾನು ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ವಲಸೆ ಬಂದ ಮೇಲೆ ನನ್ನ ಪ್ರಯತ್ನ ವಿಮಾನ ನಿಲ್ದಾಣ ಸ್ಥಾಪನೆಯಾಗುವುದಿತ್ತು.
ಬುರುಣಾಪುರದಲ್ಲಿ ಸ್ಥಾಪನೆ ಮಾಡುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನು ಇಲ್ಲ. ಜನರ ಅಭಿಪ್ರಾಯದಂತೆ ವಿಮಾನ ನಿಲ್ದಾಣ ಸ್ಥಾಪನೆಗೆ ಶ್ರಮಿಸಿದ್ದೇನೆ ಎನ್ನುವ ತೃಪ್ತಿ ಇದೆ ಎಂದರು.
ಕೆಲವರು ಟೀಕೆ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಏಕೆಂದರೆ ತೆಗಳುವವರು ನನಗೆ ಗುರುಗಳಿದ್ದ ಹಾಗೆ. ಹೊಗುಳುವರಿಗಿಂತ ತೆಗಳುವವರು ನನ್ನ ಬೆಳವಣಿಗೆಗೆ ಸಹಾಯಕವಾಗಿದ್ದಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನ 15-20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ನಳಿನ್ ಕುಮಾರ್ ಕಟೀಲ್