ವಿಜಯಪುರ: ಮುಂದೊಂದು ದಿನ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಸಂಸದ ರಮೇಶ ಜಿಗಜಿಣಗಿ ಪುನರುಚ್ಛರಿಸಿದರು. ವಿಜಯಪುರದಲ್ಲಿ ಇಂದಿನಿಂದ ಆರಂಭಗೊಂಡ ದ್ರಾಕ್ಷಿ ಮಾರಾಟ ಹಾಗೂ ಪ್ರದರ್ಶನ ಮೇಳ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷಗಳಾಗಲೀ ದಲಿತ ಮುಖ್ಯಮಂತ್ರಿ ಮಾಡಲೇಬೇಕು. ಮುಂದೊಂದು ದಿನ ಈ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವುದಂತೂ ನಿಶ್ಚಿತ ಎಂದರು.
ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ವರ್ಷವಾಗಿರುವ ಕಾರಣ ಯಾವುದೇ ಪಕ್ಷವಾದರೂ ಜನಪ್ರಿಯ ಬಜೆಟ್ ಮಂಡಿಸುವುದು ಸಹಜ. ನಾಲ್ಕು ವರ್ಷ ಕಾಯ್ದು ಕೊನೆಯ ಬಜೆಟ್ ಅನ್ನು ಚುನಾವಣೆ ದೃಷ್ಟಿಯಿಂದ ಆಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ರೈತರ ಮತ್ತು ಬಡವರ ಪರ ಬಜೆಟ್ ಮಂಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಗಮನ ಸೆಳೆದ ದ್ರಾಕ್ಷಿ ಮೇಳ: ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿರುವ ದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಿರೀಕ್ಷೆಯಂತೆ ಗ್ರಾಹಕರು ಆಗಮಿಸುತ್ತಿದ್ದು ಶಿವರಾತ್ರಿ ದಿನ ಈ ಸಂಖ್ಯೆ ಹೆಚ್ಚಾಗಲಿದೆ. 12ಕ್ಕಿಂತ ಹೆಚ್ಚು ತಳಿ ದ್ರಾಕ್ಷಿಗಳನ್ನು ರೈತರು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಮೊದಲ ದಿನವಾದ ಇಂದು 6 ದ್ರಾಕ್ಷಿ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು. ತಾಮ್ಸನ್ ಸೀಡ್ ಲೇಸ್, ಮಾಣಿಕ್, ಚಮನ್, ಸೋನಾಕ್, ಎಸ್ಎಸ್ಎನ್ ಮತ್ತು ಅನುಷ್ಕಾ ಅವುಗಳಲ್ಲಿ ಪ್ರಮುಖವಾದ ತಳಿಗಳು. ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮುಖ್ಯವಾಗಿ 2 ಕೆಜಿಯ 12 ಸಾವಿರ ಬಾಕ್ಸ್ ಹಾಗೂ 4 ಕೆಜಿಯ 6 ಸಾವಿರ ಬಾಕ್ಸ್ಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಪ್ರತಿ ಕೆಜಿಗೆ 80-90 ರೂ. ಇದ್ದರೆ ಬಾಕ್ಸ್ ಖರಿದಿಸಿದರೆ 140-160ರೂ. ವರೆಗೆ ಬೆಲೆ ಇದೆ.
ಶಿವರಾತ್ರಿ ವಿಶೇಷ: ವಿಜಯಪುರದಲ್ಲಿ ದ್ರಾಕ್ಷಿ ಮೇಳ ಆಯೋಜನೆ ಮಾಡಿರುವುದೇ ಮಹಾ ಶಿವರಾತ್ರಿಯ ಅಂಗವಾಗಿ. ಅಂದು ಶಿವಗಿರಿಯಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಲವೆಡೆ ಬರುವ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತರು ಉಪವಾಸ ಆಚರಿಸುವ ಹಿನ್ನೆಲೆಯಲ್ಲಿ ಅವರ ಉಪಯೋಗಕ್ಕಾಗಿ ಒಂದೇ ಸೂರಿನಡಿ ದ್ರಾಕ್ಷಿ, ಕಲ್ಲಂಗಡಿ, ಕರ್ಜೂರ ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಇದರ ಜತೆ ಸಾಬೂದಾನಿ, ಚಕ್ಕಲಿ, ನಿಬ್ಬಟ್ಟು ಸೇರಿದಂತೆ ಕರಿದಿರುವ ಪದಾರ್ಥಗಳನ್ನು ಸಹ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಮೊದಲ ದಿನವಾದ ಇಂದು ಗ್ರಾಹಕರು ಸಂತೋಷದಿಂದ ದ್ರಾಕ್ಷಿ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು. ಸಂತೆಯಲ್ಲಿನ ದ್ರಾಕ್ಷಿಗಿಂತ ಇಲ್ಲಿ ಕಡಿಮೆ ಬೆಲೆಗೆ ದೊರೆತಿರುವುದು ಸಂತಸ ತಂದಿದೆ. ದ್ರಾಕ್ಷಿ ಜತೆ ಬೇರೆ ಹಣ್ಣು, ಕರಿದಿರುವ ಪದಾರ್ಥಗಳು ದೊರೆಯುತ್ತಿರುವುದಕ್ಕೆ ಗ್ರಾಹಕರು ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ: ಸರ್ಕಾರಿ ಶಾಲೆಗೆ ಡೆಸ್ಕ್ ವಿತರಿಸಿದ ಕೊಪ್ಪಳ ಅಭಿಮಾನಿಗಳು