ವಿಜಯಪುರ : ನಗರದ ಹೊರವಲಯದಲ್ಲಿ ಸುಮಾರು 95 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, 125 ಕೋಟಿ ರೂ. ವೆಚ್ಚದ ಎರಡನೇ ಹಂತ ಹಾಗೂ 80 ರಿಂದ 90 ಕೋಟಿ ರೂ. ವೆಚ್ಚದ ಮೂರನೇ ಹಂತದ ವಿಸ್ತರಣಾ ಕಾಮಗಾರಿಗಾಗಿ ಕೇಂದ್ರ ಸರ್ಕಾರ ಇಲ್ಲವೇ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಬುರಣಾಪುರ ಹಾಗೂ ಮದಭಾವಿ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಮುಂದೆ ಜಿಲ್ಲೆಯ ತೋಟಗಾರಿಕಾ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ರಫ್ತಿಗಾಗಿ ವಾಣಿಜ್ಯೋದ್ಯಮ ಏರ್ ಬಸ್ -320 ವಿಮಾನಗಳ ಹಾರಾಟಕ್ಕೂ ವಿಮಾನ ನಿಲ್ದಾಣವನ್ನು ವಿಸ್ತರಿಸುವುದು ಅವಶ್ಯಕವಾಗಿದೆ. ಇದರಿಂದ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
ವಿಮಾನ ನಿಲ್ದಾಣದ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹಗಲು-ರಾತ್ರಿ ಕೆಲಸ ನಡೆಯುತ್ತಿದ್ದು, 10 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ವಿಮಾನ ನಿಲ್ದಾಣ ನಿರ್ಮಾಣ ವಿಜಯಪುರ ಜಿಲ್ಲೆಯ ಬಹುದಿನಗಳ ಕನಸಾಗಿತ್ತು. ಸುಮಾರು 95 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿಗಳಾದ ರನ್ ವೇ, ಟ್ಯಾಕ್ಸಿವೇ, ಏಪ್ರಾನ್ ಪಾರ್ಕಿಂಗ್, ವಿಮಾನ ನಿಲ್ಧಾಣ ಆವರಣದಲ್ಲಿ ಕೂಡು ರಸ್ತೆ ಹಾಗೂ ಒಳ ರಸ್ತೆಗಳು, ಫೆರಿಫೆರಲ್ ರಸ್ತೆ ಹಾಗೂ ಇತರೆ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಎರಡನೇ ಹಂತದ ಕಾಮಗಾರಿಗಾಗಿ ಸುಮಾರು 125 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಕಟ್ಟಡ, ಎ.ಟಿ.ಸಿ ಟವರ್, ಸಿ.ಎಫ್.ಆರ್ ಕಟ್ಟಡ, ಸುತ್ತಲೂ ಕಾಪೌಂಡ್ ಗೋಡೆ ನಿರ್ಮಾಣ, ನೀರು ಸರಬರಾಜು ಮತ್ತು ನೈರ್ಮಲ್ಯ, ಎಕ್ಸ್ಟರ್ನಲ್ ವಾಟರ್ ಸಪ್ಲೈ ಹಾಗೂ ರೈನ್ ವಾಟರ್ ಹಾರ್ವೆಸ್ಟಿಂಗ್, ಮೇಲ್ಮಟ್ಟು ನೀರು ಸಂಗ್ರಹಾಲಯ, ಪಂಪ್ ಹೌಸ್ ಮತ್ತು ಕೆಳಮಟ್ಟದ ನೀರು ಸಂಗ್ರಹಾಲಯ, ಚರಂಡಿ ವ್ಯವಸ್ಥೆ, ಏರ್ಪೋರ್ಟ್ ಸೆಕ್ಯೂರಿಟಿ ಇಕ್ಯೂಪ್ಮೆಂಟ್, ಜಿಲ್ಲಾ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದ ಗಡಿಯವರೆಗೆ ಅಪ್ರೋಚ್ ರೋಡ್, ವಿದ್ಯುತ್ತೀಕರಣ, ಕೇಬಲ್ ಹಾಗೂ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಂಸದರು ತಿಳಿಸಿದರು.