ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರ ಮಾಜಿ ಕಾರು ಚಾಲಕ ಕೊಲೆಯಾಗಿದ್ದಾರೆ. ವಿಜಯಪುರ ನಗರದ ಅಲಕುಂಟೆ ನಗರದಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಮಲ್ಲಿಕಾರ್ಜುನ ದೊಡ್ಡಮನಿ (43) ಹತ್ಯೆಯಾದ ಚಾಲಕ.
ಇಂದು ಮುಂಜಾನೆ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಆದರ್ಶನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಎಸ್ಪಿ ಶಂಕರ ಮಾರಿಹಾಳ, ಆದರ್ಶನಗರ ಪಿಎಸೈ ಯತೀಶ್ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲ್ಲಿಕಾರ್ಜುನ ದೊಡ್ಡಮನಿ ಓಡಿಸುತ್ತಿದ್ದ ಆಟೋ ಕೊಲೆಯಾದ ಸ್ಥಳದಲ್ಲಿ ಪತ್ತೆಯಾಗಿದ್ದು, ಪರಿಶೀಲಿಸಿದಾಗ ಆತನ ವಿಳಾಸ ಸಿಕ್ಕಿದೆ. ನಂತರ ಸಂಬಂಧಿಕರಿಗೆ ವಿಷಯ ತಿಳಿಸಲಾಗಿತ್ತು.
ಹಣಕಾಸಿನ ವಿಚಾರಕ್ಕೆ ಕೊಲೆ? : ಆಟೋ ಚಾಲಕನಾಗಿದ್ದ ಮಲ್ಲಿಕಾರ್ಜುನ ಈ ಹಿಂದೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷದ ಹಿಂದೆ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದರು. ಆ ಬಳಿಕ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಈ ಕೊಲೆ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ನಡೆದಿರಬಹುದೆಂದು ಪೊಲೀಸರು ಶಂಖೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜನ ಆಟೋವನ್ನು ಮನೆಯಲ್ಲಿ ಬಿಟ್ಟು ಸರಿಯಾಗಿ ಕೆಲಸಕ್ಕೆ ಹೋಗದೇ ಅಲೆದಾಡುತ್ತಿದ್ದರು. ಹಣಕ್ಕಾಗಿ ಅಲ್ಲಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ನಗರದ ಬಾಡರ ಓಣಿಯ ನಿವಾಸಿಯಾಗಿದ್ದ ಇವರು ನಿನ್ನೆ ರಾತ್ರಿ ತನ್ನ ಅಕ್ಕನನ್ನು ಆಕೆಯ ಮನೆಗೆ ಬಿಡಲು ಹೋಗಿದ್ದರು. ನಂತರ ಮನೆಯಿಂದ ವಾಪಸ್ ಬರುವಾಗ ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದು ಮಾಹಿತಿ ಸಿಕ್ಕಿದೆ.
ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಯತೀಶ ನೇತ್ವತೃದಲ್ಲಿ ತನಿಖೆಗೆ ತಂಡ ರಚನೆ ಮಾಡಲಾಗಿದ್ದು ಆರೋಪಿಗಳ ಜಾಡು ಹಿಡಿದು ಪತ್ತೆ ಕಾರ್ಯ ಆರಂಭವಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ವಿಷಯ ತಿಳಿದು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರೇಮಿಗಳ ಆತ್ಮಹತ್ಯೆ ಪ್ರಕರಣ: ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮ ಹೊರವಲಯಯದಲ್ಲಿ ಇತ್ತೀಚೆಗೆ ನಡೆದಿತ್ತು. ರಾಕೇಶ್ ಅಂಬಲಿ (23) ಮತ್ತು ಸಾವಿತ್ರಿ ಅಂಬಲಿ (19) ಮೃತಪಟ್ಟಿದ್ದರು. ಸಾವಿಗೂ ಮುನ್ನ ತಮ್ಮ ಆಸೆಯಂತೆ ಮದುವೆಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಜೋಡಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ.. ಹರಪನಹಳ್ಳಿಯಲ್ಲಿ ಮಕ್ಕಳೊಂದಿಗೆ ತಾಯಿ ಸೂಸೈಡ್