ವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಸೋಲಾಪುರ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ವಿಶಾಲ್ ವಾಲಿ ಎಂಬವರಿಗೆ ಸೇರಿದ ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಸೋಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ವೇಳೆ, ಕಾರು ನಿಲ್ಲಿಸಿದ ಚಾಲಕ ಸೇರಿದಂತೆ ಮೂವರು ಇಳಿದು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ತಕ್ಷಣವೇ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿರುವ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲೆಗೆ ವಾಹನ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಯಾವ ಕಾರಣಕ್ಕಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿರಿ: ಮೇಲ್ಜಾತಿ ಯುವಕನನ್ನು ವಿವಾಹವಾಗಿದ್ದೇ ತಪ್ಪಾಯ್ತಾ? ದಲಿತ ಮಹಿಳೆಗೆ ಕಿರುಕುಳ!
ಬೆಂಕಿಯ ಹೊಗೆ ಸಹ ಬಾನೆತ್ತರಕ್ಕೆ ಕಾಣಿಸುತ್ತಿತ್ತು. ಕಾರಿಗೆ ಬೆಂಕಿ ಹೊತ್ತಿ ಕೊಂಡ ದೃಶ್ಯ ನೋಡಲು ದಾರಿ ಹೋಕರು,ವಾಹನ ಚಾಲಕರು ನಿಂತುಕೊಂಡು ನೋಡುವ ದೃಶ್ಯ ಸಾಮಾನ್ಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.