ಮುದ್ದೇಬಿಹಾಳ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಗಳ ಹಿನ್ನೆಲೆ, ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ತಾಯಂದಿರು ಕಳೆದ ಮೂರು ದಿನಗಳಿಂದ ದೇವರ ಮೊರೆ ಹೋಗಿದ್ದಾರೆ. ಪಟ್ಟಣದ ವೀರೇಶ್ವರ ವೃತ್ತದಲ್ಲಿರುವ ಪಿಲೆಕೆಮ್ಮ ದೇವಸ್ಥಾನದಲ್ಲಿ ತಾಯಂದಿರು ಮಕ್ಕಳಿಗೆ ಏನೂ ಆಗದಿರಲಿ ಎಂದು ಪ್ರಾರ್ಥಿಸಿ, ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂದು ದೇವಿಗೆ ಅಂಬಲಿ, ತನುವು ಉಂಡೆ ನೈವೇದ್ಯ ಮಾಡುತ್ತಿದ್ದಾರೆ.
ಈ ಆಚರಣೆಯನ್ನು ಒಟ್ಟು ಐದು ದಿನಗಳ ಕಾಲ ಮಾಡುವುದಾಗಿ ತಿಳಿಸಿದ್ದಾರೆ. ನಾಲತವಾಡ ಪಟ್ಟಣದ ವಿನಾಯಕ ನಗರದ ಮಹಿಳೆಯರಿಂದ ಈ ಪ್ರಾರ್ಥನಾ ಕಾರ್ಯ ನಡೆಯುತ್ತಿದೆ. ಪ್ರತಿನಿತ್ಯ ದೇವತೆಗೆ ನೈವೇದ್ಯ, ನಂತರ ರಾತ್ರಿ ಮಹಿಳೆಯರಿಂದ ನಾಲ್ಕು ಗಂಟೆಗಳ ಕಾಲ ಹಾಡು ಭಜನೆ ಮಾಡುತ್ತಾ ದೇವಿಯನ್ನು ಆರಾಧನೆ ಮಾಡುತ್ತಿದ್ದಾರೆ.
ಈ ಪ್ರಾರ್ಥನಾ ಕಾರ್ಯದಲ್ಲಿ ಶಿವಲಿಂಗಮ್ಮ ಬಿರಾದಾರ, ಅಕ್ಕಮ ಗಂಗನಗೌಡರ, ರೇಣುಕಾ ಹಳಮನಿ, ಗುರಬಾಯಿ ಹುನಗುಂದ, ಸುಜಾತ ಹಳಮನಿ ಮಲ್ಲಮ್ಮ ಗಂಗನಗೌಡರ ಶಿವಲೀಲಾ ಮೊದಲಾದ ಮಹಿಳೆಯರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯು ವಿದ್ಯಾರ್ಥಿಗಳ ಮಾಸ್ ಪಾಸ್: ಪದವಿ ಕಾಲೇಜುಗಳಿಗೆ ಫುಲ್ ಡಿಮ್ಯಾಂಡ್ ನಿರೀಕ್ಷೆ