ವಿಜಯಪುರ: ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆ, ಬೆಳೆ ಪರಿಹಾರವಾಗಿ ಒಟ್ಟು 6,419 ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಪ್ರಸಕ್ತ 2020ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಜಿಲ್ಲೆಯ ಒಟ್ಟು 6,087 ಮನೆಗಳು ಹಾನಿಯಾಗಿದ್ದು, ಸಿಂದಗಿ ತಾಲೂಕಿನಲ್ಲಿ ಮಾತ್ರ ತಾಂತ್ರಿಕ ತಂಡಗಳಿಂದ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಉಳಿದ ತಾಲೂಕುಗಳಲ್ಲಿ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಆ ಪೈಕಿ 1,100 ಮನೆಗಳ ಹಾನಿಯ ಮಾಹಿತಿಯನ್ನು ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಎಂದಿದ್ದಾರೆ.
ಡೇಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದ್ದು, ಮನೆ ಹಾನಿಯ ಪರಿಹಾರ ಧನ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ನೇರವಾಗಿ ಖಾತೆಗೆ ಜಮೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಒಟ್ಟು 1,63,336 ಲಕ್ಷ ರೈತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು, ಈ ಪೈಕಿ 3 ಹಂತಗಳಲ್ಲಿ ಒಟ್ಟು 6,419 ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದಿದ್ದಾರೆ.