ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಚೇತಕ್ ಡೈಲಿಂಗ್ ಸೆಂಟರ್ ಹಿಂಭಾಗದ ತಗಡಿನ ಶೀಟ್ ಅನ್ನು ಒಡೆದಿರುವ ಕಳ್ಳರು ಅಂಗಡಿಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿ ಕೇಬಲ್ ಸಂಪರ್ಕ ಕಡಿತಗೊಳಿಸಿ ಕಳ್ಳತನ ಮಾಡಲಾಗಿದೆ. ಈ ಘಟನೆ ನಗರದ ಜನರನ್ನು ತಲ್ಲಣಕ್ಕೀಡು ಮಾಡಿದೆ. ಮೊದಲೇ ವ್ಯಾಪಾರಸ್ಥರು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದು, ಈ ಕಳ್ಳತನ ಪ್ರಕರಣ ಮತ್ತಷ್ಟು ಆತಂಕ ಸೃಷ್ಟಿಸಿದೆ.
ವಿಷಯ ತಿಳಿಯತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಅಂಗಡಿಯ ಮಾಲೀಕ ಮಯೂರಸಿಂಗ್ ರಾಯಚೂರು ಹಾಗೂ ಉದಯಸಿಂಗ್ ರಾಯಚೂರು, ಮಧ್ಯರಾತ್ರಿ ಅಂಗಡಿಯಲ್ಲಿ ಕಳುವಾದ ಬಗ್ಗೆ ಯಾರೋ ಒಬ್ಬರು ಕರೆ ಮಾಡಿ ಮಾಹಿತಿ ನೀಡಿದರು. ಅಂಗಡಿಯಲ್ಲಿ ಪ್ರತಿಷ್ಠಿತ ಕಂಪನಿಯ ಮೊಬೈಲ್ ಗಳಿದ್ದವು. ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.