ಮುದ್ದೇಬಿಹಾಳ: ತಾಳಿಕೋಟೆ ಹಾಗೂ ಮುದ್ದೇಬಿಹಾಳದಲ್ಲಿ ಮಳೆಯಿಂದಾಗಿ ಭಾರಿ ಹಾನಿಯಾಗಿರುವ ಆಸ್ತಿ ಕುರಿತು ತ್ವರಿತ ವರದಿ ನೀಡುವಂತೆ ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೂಚಿಸಿದರು.
ಪಟ್ಟಣದ ದಾಸೋಹ ನಿಲಯದ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯಿಂದಾಗಿ ಮನೆ ಹಾಗೂ ಬೆಳೆ ಹಾನಿಯಾಗಿದೆ. ಆದರೆ, ಈ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ಇನ್ನೂ ಮಾಹಿತಿ ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಲಾಕ್ಡೌನ್ ಮುಂಚೆ ಹಾಗೂ ಲಾಕ್ಡೌನ್ ತೆರವುಗೊಳಿಸಿದ ನಂತರ ಮದ್ಯದ ಮಳಿಗೆಗಳಲ್ಲಿ ಎಷ್ಟು ದಾಸ್ತಾನಿತ್ತು ಎಂಬುದವರ ವಿವರಣೆ ನೀಡುವಂತೆ ಅಬಕಾರಿ ಇಲಾಖೆ ಅಧಿಕಾರಿ ಎಸ್.ಎಸ್.ಹಂದ್ರಾಳ ಅವರಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಕುರಿತು ಎರಡು ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಎಂ.ಹೆಚ್.ಯರಝರಿ ಸಭೆಯಲ್ಲಿ ತಿಳಿಸಿದರು.
ಮುದ್ದೇಬಿಹಾಳದ ನೀಲಕಂಠೇಶ್ವರ ಹಾಗೂ ಗುಡ್ನಾಳ ಗೊಬ್ಬರದ ಅಂಗಡಿಕಾರರ ಮೇಲೆ ದೂರು ನೀಡಲಾಗಿದೆ. ಅವರಿಗೆ ನೋಟಿಸ್ ನೀಡಲಾಗಿದ್ದು, ವಾರದಲ್ಲಿ ಉತ್ತರ ಪಡೆದು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಸರಕೋಡದಲ್ಲಿ ಜಮೀನು ಇಲ್ಲದಿದ್ದರೂ ಯೂರಿಯಾ ಗೊಬ್ಬರ ಪೂರೈಸಿದ್ದ ಬ.ಬಾಗೇವಾಡಿ ತಾಲೂಕಿನ ಗೊಬ್ಬರದ ಅಂಗಡಿಯ ಪರವಾನಿಗೆ ರದ್ದುಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಕೃಷಿ ಇಲಾಖೆ, ತೋಟಗಾರಿಕೆ, ಪುರಸಭೆ, ಪಟ್ಟಣ ಪಂಚಾಯಿತಿ,ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ, ಪಶು ಸಂಗೋಪನಾ, ಮೀನುಗಾರಿಕೆ, ಅಬಕಾರಿ, ಸಣ್ಣ ನೀರಾವರಿ, ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ, ಹೆಸ್ಕಾಂ, ಕೆಆರ್‌ಐಡಿಎಲ್ ಸೇರಿದಂತೆ ಹಲವು ಇಲಾಖೆಗಳ ವ್ಯಾಪ್ತಿಯಲ್ಲಿ ಕಟ್ಟಡಗಳು, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಆಗಿರುವ ಹಾನಿಯ ಕುರಿತು ತ್ವರಿತವಾಗಿ ವಾರದಲ್ಲಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ಶಶಿಕಾಂತ ಶಿವಪೂರೆ, ಸಿಪಿಐ ಆನಂದ ವಾಘಮೋಡೆ, ತಾಳಿಕೋಟಿ ತಹಶೀಲ್ದಾರ್ ಅನಿಲಕುಮಾರ ಢವಳಗಿ, ಪುರಸಭೆ ಮುಖ್ಯಾಧಿಕಾರಿಗಳಾದ ಗೋಪಾಲ ಕಾಸೆ, ಸಿ.ವಿ.ಕುಲಕರ್ಣಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.