ಮುದ್ದೇಬಿಹಾಳ: ಮುದ್ದೇಬಿಹಾಳ ಪಟ್ಟಣದಲ್ಲಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಅವರ ಪುತ್ರ ಯುವ ಉದ್ಯಮಿ ಭರತ್ ಪಾಟೀಲ್ ನಡಹಳ್ಳಿ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಡಿಡಿಪಿಯು( ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ) ಆರ್.ಎ.ಜಹಾಗೀರದಾರ ಅವರಿಗೆ ಹಸ್ತಾಂತರಿಸಿದರು.
ನಾನು ದಾಸೋಹ ಕಾರ್ಯ ಕೈಗೊಳ್ಳಲು ನನ್ನ ಮೇಲೆ ತುಮಕೂರಿನ ಸಿದ್ದಗಂಗಾ ಶ್ರೀಗಳ ಪ್ರಭಾವವೇ ಕಾರಣ ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.
ಅವರ ಪುತ್ರ ಯುವ ಉದ್ಯಮಿ ಭರತ್ ಪಾಟೀಲ್ ನಡಹಳ್ಳಿ ಹಾಗೂ ಅವರ ಸ್ನೇಹಿತ ವಿಶಾಲ ನಿರಾಣಿ ಆಶಯದಂತೆ ಜೂ. 18 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಹಸ್ತಾಂತರಿಸಿದರು.
ವಿದ್ಯಾರ್ಥಿಗಳು ಕೊರೊನಾ ವೈರಸ್‌ನ ಭೀತಿಯಿಲ್ಲದೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಭವಿಷ್ಯ ನಿರ್ಮಿಸಿಕೊಳ್ಳಲು ಮುಂದಾಗಬೇಕು. ದೆಹಲಿಯಿಂದ ವೈದ್ಯಕೀಯ ಮಂಡಳಿಯ ಪ್ರಮಾಣೀಕೃತ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ ಎಂದು ಭರತ್ ಪಾಟೀಲ್ ನಡಹಳ್ಳಿ ಹೇಳಿದರು.
ಡಿಡಿಪಿಯು ಆರ್.ಎ.ಜಹಾಗೀರದಾರ ಮಾತನಾಡಿ, ಕೊರೊನಾ ವೈರಸ್ ಜೊತೆಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದಿಗ್ಧತೆಯಲ್ಲಿದ್ದು ಸರ್ಕಾರಿ, ಖಾಸಗಿ ಎನ್ನದೇ ಮೂರು ತಾಲೂಕುಗಳಲ್ಲಿ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಿರುವ 10 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿರುವ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಓದಿ: ಮುದ್ದೇಬಿಹಾಳ ಹುಡ್ಕೋದ ಮೂರು ಕ್ರಾಸ್ ಸೀಲ್‌ಡೌನ್, ಆರೋಗ್ಯ ಇಲಾಖೆಯಿಂದ ನಿವಾಸಿಗಳ ಸ್ಕ್ರೀನಿಂಗ್
ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂಧಗಿ ತಾಲೂಕಿನ ಒಟ್ಟು 9,908 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರವಾಗಿರುವ ಸಿಬ್ಬಂದಿ ಸೇರಿ ಒಟ್ಟು 10,500 ಮಾಸ್ಕ್, ಸ್ಯಾನಿಟೈಸರ್ ಕಿಟ್‌ಗಳನ್ನು ವಿತರಿಸಲಾಯಿತು.