ಮುದ್ದೇಬಿಹಾಳ : ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿದು ರಾಜ್ಯಸಭಾ ಸದಸ್ಯರಾಗಿ ನೇಮಕವಾಗಿದ್ದ ಅಶೋಕ ಗಸ್ತಿ ಅವರ ನಿಧನದಿಂದ ಸಮಾಜ ಹಾಗೂ ಬಿಜೆಪಿ ಬಹುದೊಡ್ಡ ಆಸ್ತಿಯೊಂದನ್ನು ಕಳೆದುಕೊಂಡಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕಂಬನಿ ಮಿಡಿದಿದ್ದಾರೆ.
ಪಟ್ಟಣದ ರಾಘವೇಂದ್ರ ಮಠದಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಗಸ್ತಿಯವರು ಕೋಲ್ಮಿಂಚಂತೆ ಮಿನುಗಿ ಮರೆಯಾಗಿದ್ದಾರೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಯ ಕನಸುಗಾರರಾಗಿದ್ದ ಗಸ್ತಿ ಅವರು, ರಾಜ್ಯಸಭೆಯ ಕಲಾಪದಲ್ಲಿ ಪಾಲ್ಗೊಳ್ಳುವ ಮುನ್ನವೇ ಅಗಲಿದ್ದು ದುಃಖಕರ ಸಂಗತಿ ಎಂದು ಹೇಳಿದರು.
ಈ ವೇಳೆ ಮಂಡಲ ಅಧ್ಯಕ್ಷ ಪರಶುರಾಮ ಪವಾರ,ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ,ತಾಪಂ ಸದಸ್ಯ ಶಿವನಗೌಡ ಮುದ್ದೇಬಿಹಾಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ,ಯುವಮೋರ್ಚಾ ಕಾರ್ಯದರ್ಶಿ ಬಸವರಾಜ ದಡ್ಡಿ , ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ ಇತರರು ಇದ್ದರು.