ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ತೊರವಿ ತಾಂಡಾದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾನಾಡಿದ ಅವರು, ಬಿಜೆಪಿಗೆ ಬ್ರೋಕರ್ ಎನ್ನುವ ನೈತಿಕತೆ ಕಾಂಗ್ರೆಸ್ನವರಿಗಿಲ್ಲ. ಜೈಲಿಗೆ ಹೋಗಿ ಬಂದವ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಬಿಪಿ, ಶುಗರ್ ಎಂದೇಳಿ ಜೈಲಿನಿಂದ ಜಾಮೀನು ಪಡೆದುಕೊಂಡು ಬಂದವರಿಗೆ ಈಗ ಮೇಕೆದಾಟು ಪಾದಯಾತ್ರೆ ಮಾಡಲು ಶಕ್ತಿ ಹೇಗೆ ಬಂತು ಎಂದು ಪ್ರಶ್ನಿಸಿದರು. ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಡಿಕೆಶಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.
ಅವಧಿಗೆ ಮುನ್ನ ಚುನಾವಣೆ ಇಲ್ಲ: ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡ ಮೇಲೆ ಸಹಜವಾಗಿ ಕರ್ನಾಟಕದಲ್ಲಿಯೂ ಅವಧಿಗೆ ಮುನ್ನ ಚುನಾವಣೆ ಬಗ್ಗೆ ಗುಸುಗುಸು ನಡೆದಿರುವುದು ಮಾಧ್ಯಮ ಮೂಲಕ ತಿಳಿದುಕೊಂಡಿದ್ದೇನೆ. ಇನ್ನೂ ಒಂದು ವರ್ಷ ಇರುವ ಕಾರಣ ಗುಜರಾತ್ ಜೊತೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬಹುತೇಕ ನಡೆಯುವುದಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಶೀಘ್ರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷವಿರುವ ಕಾರಣ ಸಂಪುಟ ವಿಸ್ತರಣೆ, ಇಲ್ಲವೇ ಪುನಾರಚನೆ ನಡೆಯಲಿದೆ. ಹಿರಿಯರಿಗೆ ಪಕ್ಷದ ಜವಾಬ್ದಾರಿ ನೀಡಿ ಹೊಸಬರಿಗೆ ಅವಕಾಶ ನೀಡಬಹುದು ಎಂದು ಹೇಳಿದರು.
ಬಿಎಸ್ವೈ ವಿಶ್ರಾಂತಿ ಪಡೆಯಲಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಿರಿಯರು, ಅವರು ಇನ್ಮುಂದೆ ವಿಶ್ರಾಂತಿ ಪಡೆಯಲಿ, ಎರಡನೇ ಹಂತದ ನಾಯಕರು ಮುಂದೆ ಬಂದಿದ್ದಾರೆ. ಅವರಿದ್ದಾಗ 104 ಸೀಟ್ಗಳನ್ನು ಪಡೆಯುತ್ತಿದ್ದೆವು. ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತೇವೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನವೀನ್ ಪಾರ್ಥಿವ ಶರೀರ ತರಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿ: ಅಧಿಕಾರಿಗಳಿಗೆ ಮೋದಿ ಸೂಚನೆ