ವಿಜಯಪುರ : ಕೃಷಿ ಕಾಯ್ದೆ ನೀತಿ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರೈತರಿಗೆ ಧನ್ಯವಾದ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಕಡೆ ಭಾರತ್ ಬಂದ್ ವಿಫಲವಾಗಿದೆ. ಪ್ರಧಾನಿ ಮೋದಿ ತಂದಿರುವುದು ರೈತ ವಿರೋಧಿ ಕಾನೂನು ಅಲ್ಲ. ರೈತ ಬೆಳೆದ ಬೆಳೆ ಆತನ ಇಚ್ಛೆಯಂತೆ ಮಾರಾಟ ಮಾಡಬೇಕು.
ಕೇವಲ ಎಪಿಎಂಸಿಗೆ ಮಾರಾಟ ಮಾಡುವುದನ್ನು ರದ್ದುಗೊಳಿಸಿದ್ದಾರೆ. ಇದರಿಂದ ರೈತ ತಾನು ಬೆಳೆದ ಬೆಳೆಗೆ ತನಗೆ ಲಾಭ ಎಲ್ಲಿ ಇರುತ್ತದೆಯೋ ಅಲ್ಲಿ ಮಾರಾಟ ಮಾಡುವ ಸ್ವತಂತ್ರ ಇದೆ ಎಂದರು.
ಕೆಲವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ. ಕೆಲವರ ಜೀವನವೇ ಹೋರಾಟದಿಂದ ನಡೆಯುತ್ತಿದೆ ಎಂದು ಹೇಳಿದರು. ದೇಶದಲ್ಲಿ ಆಂತರಿಕ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಾರೆ.
ಪಾಕಿಸ್ತಾನ, ಚೀನಾ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ದಂಗೆ ಎಬ್ಬಿಸಬೇಕು. ಭಾರತ ಅಸ್ಥಿರ ಮಾಡಬೇಕು. ಭಾರತವನ್ನು ಜಗತ್ತಿನ ಎದುರು ಅಪರಾಧಿಯಾಗಿ ನಿಲ್ಲಿಸಲು ಷಡ್ಯಂತ್ರ ಇದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ವಂಶಸ್ಥರಂತೆ ವರ್ತಿಸುತ್ತಿದ್ದಾರೆ : ಬಿಜೆಪಿಯವರು ಹಿಟ್ಲರ್ ವಂಶಸ್ಥರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಟಿಪ್ಪು ಸುಲ್ತಾನ್ ವಂಶಸ್ಥರಂತೆ ವರ್ತಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದೇಶ, ಧರ್ಮ, ಸಂಸ್ಕೃತಿ ಗೊತ್ತಿಲ್ಲ. ಕೇವಲ ವೋಟ್ ಬ್ಯಾಂಕ್ಗೆ ಒಂದು ಸಮುದಾಯ ಸಂತೃಪ್ತಿಗೊಳಿಸಲು ಅವಹೇಳನಾಕಾರಿ ಮಾತನಾಡ್ತಾರೆ. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದರು.
2ಎ ಮೀಸಲಾತಿ ವಿಚಾರ : 2ಎ ಮೀಸಲಾತಿ ವಿಚಾರವಾಗಿ ನೂತನ ಸಿಎಂ ಕಾಲಾವಕಾಶ ಕೇಳಿದ್ದಾರೆ. ಅವರು ಜಾರಿಗೊಳಿಸಲಿಲ್ಲ ಅಂದರೆ ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದರು.