ವಿಜಯಪುರ: ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು. ಎಸ್ಟಿ ಸಮುದಾಯದವರಿಗೆ ಶೇಕಡಾ 7.5 ಮೀಸಲಾತಿ ಹೆಚ್ಚಳ ಮಾಡಬೇಕು. ಮರಾಠಾ, ಪಂಚಮಸಾಲಿ, ಆದಿಬಣಜಿಗ, ಕೂಡುಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳಿಗೆ 2ಎ ಮಾನ್ಯತೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಈ ವಿಚಾರ ಕುರಿತು ಪ್ರಸ್ತಾಪ ಮಾಡುತ್ತೇನೆ. ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೇಟ್ ನೀಡದಿದ್ದರೆ ನಾನೇ ವಿಧಾನಸೌಧದಲ್ಲಿ ಧರಣಿ ಕೂಡುತ್ತೇನೆ ಎಂದರು.
ಉಪಚುನಾವಣೆ ಫಲಿತಾಂಶ:
ಸಿಂದಗಿ ಉಪಚುನಾವಣೆ ಫಲಿತಾಂಶಕ್ಕೆ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಸಾಮೂಹಿಕ ನಾಯಕತ್ವ, ಕಾರ್ಯಕರ್ತರು ಮತದಾರರು ಜಯಕ್ಕೆ ಕಾರಣ. ಜನರು ಪ್ರಧಾನಿ ಮೋದಿ ಅವರ ನೇತೃತ್ವ ಒಪ್ಪಿಕೊಂಡು ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಪರ ತೀರ್ಪು ನೀಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯ ಮಾಡಿದ ಅವರು, 2023 ರ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಾಮೂಹಿತ ನಾಯಕತ್ವದಲ್ಲಿ ನಡೆಯಲಿದೆ ಎಂದರು.
ಹಾನಗಲ್ ಕ್ಷೇತ್ರದಲ್ಲಿ ದಿ.ಸಿ.ಎಂ.ಉದಾಸಿ ಅನಾರೋಗ್ಯದ ಕಾರಣ ಜನ ಸಂಪರ್ಕ ಕಡಿಮೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೊರೋನಾ ಕಾಲದಲ್ಲಿ ಉತ್ತಮ ಕೆಲಸ ಮಾಡಿದ್ದರು. ಸಂಪರ್ಕ ಕೊರತೆಯಿಂದ ಬಿಜೆಪಿ ಸೋತಿದೆ. ಈ ಸೋಲನ್ನು ಸವಾಲಾಗಿ ತೆಗೆದುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
'ಎಲ್ಲರೂ ಹೊಟ್ಟೆಪಾಡಿಗಾಗಿಯೇ ರಾಜಕೀಯ ಮಾಡುತ್ತಾರೆ'
ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗರು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ರಾಷ್ಟ್ರ ನಾಯಕರನ್ನಾಗಿ ಮಾಡಲಿಲ್ಲ. ಅಂಬೇಡ್ಕರ್ ಸಾವಿನಲ್ಲೂ ರಾಜಕೀಯ ಮಾಡಲಾಯಿತು. ಎಲ್ಲರೂ ಹೊಟ್ಟೆಪಾಡಿಗಾಗಿ ರಾಜಕೀಯ ಮಾಡುತ್ತಾರೆ ಎಂದರು.