ವಿಜಯಪುರ : ಮಾಜಿ ಸಿಎಂ ಸಿದ್ದರಾಮಯ್ಯನವರು ಹಿರಿಯ ನಾಯಕರು. ಕಾಂಗ್ರೆಸ್ನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಅವರು ಬಿಜೆಪಿಗೆ ಬಂದರೆ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದಾರೆ. ಅವರ ಮನೆಯವರೇ ಅವರ ಜೊತೆ ಟಚ್ನಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದರು.
ಹೊಸ ಪಕ್ಷ ಕಟ್ಟಲ್ಲ : ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಕೂಡಿ ನೂತನ ಪಕ್ಷ ಕಟ್ಟೋ ವದಂತಿಗೆ ಪ್ರತಿಕ್ರಿಯಿಸಿ, ದೇವೇಗೌಡರ ಪಕ್ಷವೇ ಮಲಗಿದೆ. ನಾವೆಲ್ಲಿ ಪಕ್ಷ ಕಟ್ಟೋದು, ಪಕ್ಷ ಕಟ್ಟಲು ಹಣಬೇಕು. ನಮ್ಮ ಬಳಿ ಹಣ ಇಲ್ಲ. ನಮ್ಮ ಹತ್ತಿರ ಲೂಟಿ ಮಾಡಿದ ಹಣ ಇಲ್ಲ. ಇದ್ದಿದ್ದರೆ ಮಾಡುತ್ತಿದ್ದೆವು. ನಾವು ಬಿಜೆಪಿ ಪಕ್ಷ ಕಟ್ಟಿದವರು. ಜಾರಕಿಹೊಳಿ ಹಾಗೂ ನಾವು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಚರ್ಚೆ ಮಾಡಿದ್ದೇವೆ. ದೇವರ ಸಾಕ್ಷಿಯಾಗಿ ಯಾವುದೇ ಪಕ್ಷ ಕಟ್ಟಲ್ಲ ಎಂದರು.
ಮಂತ್ರಿ ಸ್ಥಾನ ಪಕ್ಕಾ: ಸಿಎಂ ಹಾಗೂ ವರಿಷ್ಠರು ನಮ್ಮ ಜೊತೆಗೆ ಇರೋದಾಗಿ ಹೇಳಿದ್ದಾರೆ. ಸಚಿವ ಸ್ಥಾನ ವಂಚಿತ ವಿಜಯಪುರಕ್ಕೆ ಈ ಬಾರಿ ಅವಕಾಶ ಸಿಕ್ಕೇ ಸಿಗುತ್ತದೆ. ನೂರಕ್ಕೆ ನೂರರಷ್ಟು ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗಲಿದೆ. ನಗರದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿಯವರು 52 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಇನ್ನೂ 200 ಕೋಟಿ ಹಣ ನೀಡಲಿದ್ದು, ಮುಂದಿನ ಆರು ತಿಂಗಳಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಯುಟಿ ಖಾದರ್ ನೇಮಕ
ನಿರಾಣಿ ಜೊತೆ ಹೋಲಿಸಬೇಡಿ : ನಿರಾಣಿ ವರ್ಸಸ್ ಯತ್ನಾಳ್ ಎಂಬ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿ, ನಿರಾಣಿ ಅಂಥರವರಿಗೆಲ್ಲ ಅಂಜಿ ರಾಜಕಾರಣ ಮಾಡುವವನಲ್ಲ. ನಾನೇ ನಿರಾಣಿನಾ ಬಿಜೆಪಿಗೆ ತಂದು ಟಿಕೆಟ್ ಕೊಡಿಸಿದ್ದು, ಅವರಿಗೇಕೆ ನನ್ನನ್ನು ಹೋಲಿಕೆ ಮಾಡುತ್ತೀರಿ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ