ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯ ಉನ್ನತ ಮಟ್ಟದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಾಯಕರೊಬ್ಬರು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ಪಕ್ಷದ ನಾಯಕರ ಬಳಿ ಇನ್ನೂ ಹಲವರ ಸಿಡಿಗಳು ಇರಬಹುದು. ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಎಸ್ಐಟಿಗೆ ವಹಿಸಿರುವುದರಲ್ಲಿಯೇ ಸಂಶಯವಿದೆ. ಸಿಎಂ ಪುತ್ರ ವಿಜಯೇಂದ್ರ ಅವರ ಆಪ್ತ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿದ್ದರು. ಅದು ತಾರ್ತಿಕ ಅಂತ್ಯ ಕಾಣಲಿಲ್ಲ.
ಚಿತ್ರ ನಟಿಯರನ್ನು ಬಂಧಿಸಿದ ವೇಳೆ ಅವರ ಬಳಿ ಡ್ರಗ್ಸ್ ಇಲ್ಲ. ಕೇವಲ ಫೋನ್ ಸಂದೇಶ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ನಟಿಯರಿಗೆ ಜಾಮೀನು ನೀಡಿದೆ. ಅದೇ ರೀತಿ ರಾಜಕಾರಣಿಗಳ ನಿಕಟ ಸಂಪರ್ಕ ಹೊಂದಿದ್ದ ಯುವರಾಜ ಕೇಸ್ ಸಹ ಯಾವುದೇ ಅಂತ್ಯ ಕಾಣಲಿಲ್ಲ. ಈಗ ಅದೇ ಪೊಲೀಸ್ ಅಧಿಕಾರಿ ಎಸ್ಐಟಿ ತನಿಖಾ ತಂಡದಲ್ಲಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯುವದು ಅನುಮಾನವಾಗಿದೆ ಎಂದರು.
ನಿನ್ನೆ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುತ್ತಿದ್ದಂತೆ ಆ ಸಂತ್ರಸ್ತೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಎಷ್ಟು ಪಾರದರ್ಶಕತೆಯ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ ಎಂದು ತಿಳಿದುಕೊಳ್ಳಬಹುದು. ಸಿಡಿಯಲ್ಲಿ ಮಾತನಾಡಿದ ಯುವತಿಯ ಭಾಷೆ ಸಹ ಬದಲಾಗಿದೆ. ಸೆಕ್ಸ್ ಸಿಡಿ ಎನ್ನಲಾದ ವಿಡಿಯೋದಲ್ಲಿ ಬೀದರ್ ಶೈಲಿಯ ಭಾಷೆಯಲ್ಲಿ ಮಾತನಾಡಿದ್ದಾಳೆ. ನಿನ್ನೆ ಆಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪಕ್ಕಾ ಬೆಂಗಳೂರು ಶೈಲಿಯ ಭಾಷೆ ಮಾತನಾಡಿದ್ದಾಳೆ. ಎಷ್ಟೇ ಆದರೂ ಭಾಷೆ ಬದಲಾಗುವದು ಕಠಿಣ. ಹೀಗಾಗಿ ಇದರಲ್ಲಿ ಹಲವು ಅನುಮಾನಗಳಿವೆ. ಸಂಪೂರ್ಣ ಹಾಗೂ ನ್ಯಾಯಯುತ ತನಿಖೆ ನಡೆಸಬೇಕಾದರೆ ಪ್ರಕರಣವನ್ನು ಎಸ್ಐಟಿ ಬದಲು ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ಇದನ್ನೂ ಓದಿ: ಸಾಹುಕಾರ್ ವಿರುದ್ಧ ದಾಖಲಾಗುತ್ತಾ ಎಫ್ಐಅರ್?: ಮತ್ತೆ ಐವರನ್ನು ವಿಚಾರಣೆಗೆ ಕರೆದ ಎಸ್ಐಟಿ