ವಿಜಯಪುರ : ರಾಜ್ಯದ ವಿಧಾನಸಭೆಯ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಹಿಜಾಬ್, ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಹತ್ಯೆ ಮರೆಮಾಚಲು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಇದೊಂದು ಮುಂಬರುವ ವಿಧಾನಸಭೆ ಚುನಾವಣೆ ಸ್ಟಂಟ್ ಆಗಿದೆ. ಕಾಂಗ್ರೆಸ್‌ಗೆ ಉದ್ಯೋಗ ಇಲ್ಲ, ಚುನಾವಣೆ ಸಲುವಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಪಾವಿತ್ರತ್ಯೆ ಇಲ್ಲ, ಹಿಂದಿನ ಸರ್ಕಾರದಲ್ಲಿ ಡಿಕೆಶಿ, ಎಂ. ಬಿ.ಪಾಟೀಲ್ ನೀರಾವರಿ ಸಚಿವರಿದ್ದರೂ ಏನೂ ಮಾಡಲಾಗಲಿಲ್ಲ. ಮೈತ್ರಿ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಯಾಕೇ ಮಾಡಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಪಾದಯಾತ್ರೆ ವೇಸ್ಟ್ ಆಫ್ ಟೈಂ, ವೇಸ್ಟ್ ಆಫ್ ಮನಿ : ಎನ್.ರವಿಕುಮಾರ್
ಹರ್ಷನ ಹತ್ಯೆ ಪ್ರಕರಣ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಹರ್ಷನ ತಾಯಿಗೆ ಬಿಜೆಪಿ ಟಿಕೆಟ್ ಅಭಿಯಾನ ಮಾಡುತ್ತಿದ್ದಾರೆ, ಇದು ಒಳ್ಳೆಯದು. ಆದರೆ, ರಾಜಕಾರಣದಲ್ಲಿ ಆಯಾ ಪಕ್ಷಗಳು ನಿರ್ಣಯ ಮಾಡುತ್ತದೆ, ಅದಕ್ಕಾಗಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಗೃಹ ಸಚಿವರು ಗಟ್ಟಿಯಾಗಬೇಕು: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಟ್ಟಿ ಯಾಗಬೇಕು ಎನ್ನುವ ಮೂಲಕ ಗೃಹ ಸಚಿವ ವಿರುದ್ಧ ಸ್ವಪಕ್ಷೀಯ ಶಾಸಕ ಯತ್ನಾಳ ಅಸಮಾಧಾನ ಹೊರಹಾಕಿದರು. ಆರೋಪಿಗಳನ್ನು ಬಂಧನ ಮಾಡಿದರೆ ಆಗುವುದಿಲ್ಲ, ಶೀಘ್ರದಲ್ಲೇ ನ್ಯಾಯ ಎನ್ನುವುದು ಬೇಕು. ಆರೋಪಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದರು.
ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ, ಎಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಿದೆ, ಸಂದರ್ಭ ಹೇಗೆ ಬರುತ್ತದೆ ಗೊತ್ತಿಲ್ಲ. ಸಂದರ್ಭ ಬಂದ ಮೇಲೆ ಗೃಹ ಇಲಾಖೆ ಹಾಗೂ ಪೊಲೀಸರು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಕ್ರಮ ತೆಗದುಕೊಳ್ಳುತ್ತಾರೆ ಎಂದರು.