ವಿಜಯಪುರ: ಸಿಎಂ ನಿವಾಸದಲ್ಲಿ ಹಾವು, ಚೇಳುಗಳು ಹೆಚ್ಚಾಗಿವೆ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬ ವರ್ಗದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮುಷ್ಠಿಯಲ್ಲಿ ಸಿಎಂ ಯಡಿಯೂರಪ್ಪನವರಿದ್ದಾರೆ. ಅವರ ಕುಟುಂಬದ ಸದಸ್ಯರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಮಕ್ಕಳೆಲ್ಲರೂ ಸಿಎಂ ಅವರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಎಸ್ವೈ ಪ್ರತಿಪಕ್ಷದ ನಾಯಕರಾಗಿದ್ದ ವೇಳೆ ಅವರ ಮನೆಗೆ ಯಾರು ಸುಳಿಯುತ್ತಿರಲಿಲ್ಲ. ಈಗ ಸಿಎಂ ಆದ ನಂತರ ಅವರ ಇಡಿ ಕುಟುಂಬವೇ ಕಾವೇರಿ ನಿವಾಸದಲ್ಲಿ ಬೀಡು ಬಿಟ್ಟಿದೆ. ಅವರಿಂದ ಸಿಎಂ ಹೆಸರು ಕೆಡುತ್ತಿದೆ. ಹೀಗಾಗಿ ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ. ವಿಶೇಷವಾಗಿ ವಿಜಯೇಂದ್ರ ಕುಟುಂಬದ ಹೆಸರನ್ನು ಕೆಡಿಸುತ್ತಿದ್ದಾರೆ. ಅವರ ಬೆಂಬಲಿಗರೆಲ್ಲ ಈಗ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ ಎನ್ನುವ ಮೂಲಕ ಯತ್ನಾಳ್ ಹರಿಹಾಯ್ದರು.
ವಿಜಯೇಂದ್ರನ ದೊಡ್ಡ ತಂಡವೇ ಇದೆ, ಅವರಿಗೆ ಬೇಡವಾದವರ ಕುರಿತು ನಕಲಿ ಸಿಡಿ ತಯಾರಿಸುವ ಕೇಂದ್ರವನ್ನು ಇಟ್ಟುಕೊಂಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು. ಜೊತೆಗೆ ಈ ಹಿಂದೆ ಬಿಎಸ್ವೈ ಪಕ್ಷ ಕಟ್ಟುವಾಗ ಅವರ ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದವರು ನಾವು. ಈಗ ಬಿಎಸ್ವೈಗೆ ಪುತ್ರ ವ್ಯಾಮೋಹ ಪರಾಕಾಷ್ಠೆ ತಲುಪಿದೆ. ಇಷ್ಟು ದಿನ ಆ ಸ್ವಾಮೀಜಿ, ಈ ಸ್ವಾಮೀಜಿ ಎಂದು ಹೇಳುತ್ತಿದ್ದವರು ಈಗ ಸುತ್ತೂರು ಶ್ರೀಗಳಿಗೆ ನೇತ್ವತ್ವ ವಹಿಸಿಕೊಳ್ಳುವಂತೆ ಹೇಳುತ್ತಿದ್ದಾರೆ ಎಂದರು.
ನಿರಾಣಿ ವಿರುದ್ಧ ವಾಗ್ದಾಳಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ವಿಜಯೇಂದ್ರ ಜತೆ ಸಚಿವ ಮುರುಗೇಶ್ ನಿರಾಣಿ ಕೈ ಜೋಡಿಸಿ ದೊಡ್ಡ ಷಡ್ಯಂತ್ರ ನಡೆಸಿದ್ದಾರೆ. ನಿರಾಣಿಗೆ ಸಚಿವರಾಗಲು ಮಾತ್ರ ನಮ್ಮ ಸಮುದಾಯ ಬೇಕು. ಇಲ್ಲಿಯವರೆಗೆ ಮೀಸಲಾತಿ ಬೇಡಿಕೆಗೆ ಬೆಂಕಿ ಹಚ್ಚಿದ್ದೇ ನಿರಾಣಿ, ಈಗ ಸಚಿವರಾದ ಮೇಲೆ ಸಿಎಂಗೆ ನೋವಾಗುತ್ತಿದೆ ಎಂದು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೈಕಮಾಂಡ್ ಹೇಳಿಲ್ಲ: ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಬಾರದು ಎಂದು ಹೈಕಮಾಂಡ್ ಹೇಳಿಲ್ಲ. ಬಿಎಸ್ವೈ ಹೈಕಮಾಂಡ್ಅನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ವೀರಶೈವ ಸಮಾಜವನ್ನು ಒಬಿಸಿಗೆ ಸೇರಿಸಲು ಬೆಳಗ್ಗೆ ನಿರ್ಧರಿಸಿ, ನಂತರ ಕ್ಯಾಬಿನೆಟ್ ಅಜೆಂಡಾದಿಂದ ಏತಕ್ಕೆ ಹಿಂಪಡೆದಿದ್ದೀರಿ ಎಂದು ಪ್ರಶ್ನಿಸಿದರು.
ಸಿಎಂ ಕುಟುಂಬಸ್ಥರೆಲ್ಲ ಇತ್ತೀಚೆಗೆ ಮಾರಿಷಸ್ ಗೆ ತೆರಳಿದ್ದರು. ಅವರು ಯಾವ ಕಾರಣಕ್ಕಾಗಿ ಹೋಗಿದ್ದರು, ಅಲ್ಲಿರುವ ಹಣದ ವ್ಯವಹಾರದ ಬಗ್ಗೆ ತಿಳಿಸಬೇಕು ಎಂದು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ.