ಮುದ್ದೇಬಿಹಾಳ: ರಾಜ್ಯದಲ್ಲಿ 2023ರವರೆಗೆ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಬದಲಾವಣೆ ಕನಸಿನ ಮಾತು. ಯಾರು ಸಿಎಂ ವಿರುದ್ಧ ಷಡ್ಯಂತ್ರ ಮಾಡುತ್ತಾರೋ ಅವರನ್ನು ಪಕ್ಷದಿಂದ 24 ತಾಸಿನಲ್ಲಿ ಉಚ್ಛಾಟಿಸಬೇಕು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಪಟ್ಟಣದ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಯಡಿಯೂರಪ್ಪನವರಿಂದಲೇ ಎಲ್ಲ ಸಹಾಯ ಪಡೆದುಕೊಂಡು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಸಿಎಂ ಹುದ್ದೆಯ ಬಗ್ಗೆ ಷಡ್ಯಂತ್ರ ನಡೆಸುವ ಸಚಿವರನ್ನು ಸಿಎಂ ಸಂಪುಟದಿಂದ ಕೆಳಗಿಳಿಸಬೇಕು. ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವವರ ಮೇಲೆ ಪಕ್ಷದ ರಾಜ್ಯಾಧ್ಯಕ್ಷರು ಉಚ್ಛಾಟನೆಯಂತಹ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕೆಲವು ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆದಿದೆ. ಆದರೆ ಪಕ್ಷದ ಒಮ್ಮತದ ನಾಯಕರಾಗಿರುವ ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರ ಶಾಸಕ ಯತ್ನಾಳ ಅವರು ನಿರಂತರವಾಗಿ ಸಿಎಂ ವಿರುದ್ಧ ಮಾತನಾಡಿದ್ದ ಕುರಿತಾಗಿ ಸುದ್ದಿಗಾರರು ಪ್ರಶ್ನಿಸಿದಾಗ, ಅದಕ್ಕೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.