ಮುದ್ದೇಬಿಹಾಳ: ಕೋವಿಡ್ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ನೈತಿಕತೆ ಕಾಂಗ್ರಸ್ ನಾಯಕರಿಗಿಲ್ಲ ಎಂದು ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ವಾಗ್ದಾಳಿ ಮಾಡಿದರು.
ಓದಿ: ರಮೇಶ್ ಜಾರಕಿಹೊಳಿ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮಾತನಾಡುತ್ತೇನೆ: ಡಿಕೆಶಿ
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಕಾಮಗಾರಿ, ಕೋವಿಡ್ ಸೋಂಕಿತರ ವಾರ್ಡ್ಗಳಲ್ಲಿ ಕೈಗೊಂಡಿರುವ ವ್ಯವಸ್ಥೆ ಹಾಗೂ ತಮ್ಮ ಕುಟುಂಬದ ನೇತೃತ್ವದಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಊಟದ ವ್ಯವಸ್ಥೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಿಎಂ ಕೇರ್ಸ್ ನಿಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾಗಿದ್ದ ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್‌ಗೆ ಬೇಡಿಕೆ ಸಲ್ಲಿಸುವಲ್ಲಿ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕರು ನಿರ್ಲಕ್ಷ್ಯವಹಿಸಿ ಈಗ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂದು ದೊಡ್ಡದಾಗಿ ಪ್ರಶ್ನಿಸುತ್ತಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷದಲ್ಲಿರುವ ಇಂಡಿ ಶಾಸಕ ಯಶವಂತ್ರಾಯ ಗೌಡರು ಏಕೆ ನೀವು ಪ್ರಸ್ತಾವನೆ ಕಳಿಸಲಿಲ್ಲ. ಪ್ರಧಾನ ಮಂತ್ರಿಗಳೇನು ಮಾಡಲಿಲ್ಲ, ಕೇಂದ್ರ ಸರ್ಕಾರ ಏನು ಮಾಡಲಿಲ್ಲ ಎಂದು ಟೀಕಿಸುತ್ತೀರಿ. ನೀವ್ಯಾಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಿಲ್ಲ ಎಂದು ಪ್ರಶ್ನಿಸಿದರು.
ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಜನರಿಗೆ ಒಳಿತಾಗುವ ಕೆಲಸ ಜನಪ್ರತಿನಿಧಿಗಳಾದವರು ಮಾಡಬೇಕು. ಇಂಡಿ, ಮುದ್ದೇಬಿಹಾಳ ತಾಲೂಕುಗಳು ಜಿಲ್ಲೆಯ ಕೇಂದ್ರದಿಂದ ದೂರವಿದ್ದು, ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅದರಲ್ಲಿ ಮುದ್ದೇಬಿಹಾಳ, ಬಸವನ ಬಾಗೇವಾಡಿಗೆ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಪ್ರಸ್ತಾವನೆ ಹೋಗಿದ್ದರಿಂದ ಇಂದು ಮಂಜೂರಾತಿ ದೊರೆತು ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ಮುದ್ದೇಬಿಹಾಳ ಕೋವಿಡ್ ಆಸ್ಪತ್ರೆಯಲ್ಲಿ ಈವರೆಗೆ 2,416 ಕೇಸ್ಗಳಲ್ಲಿ 368 ಜನ ಹೋಂ ಐಸೋಲೆಷನ್‌ನಲ್ಲಿದ್ದು, 13 ಜನ ಜಿಲ್ಲಾ ಕೇಂದ್ರಗಳಲ್ಲಿದ್ದಾರೆ. ಪ್ರಸ್ತುತ 415 ಕೇಸ್‌ಗಳು ಆಕ್ಟಿವ್ ಇದ್ದು, 1997 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ:
ಮೇ.27 ರಿಂದ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಲಾಗುವುದು. ಕೋವಿಡ್ ಸೋಂಕಿತರು ಹೆಚ್ಚಾದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿತ್ಯ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.