ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಅಂಬೇಡ್ಕರ್ ಸೇನೆ ಹಾಗೂ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ತಾಲೂಕಿನ ಒಂಭತ್ತು ಗ್ರಾಮಗಳಲ್ಲಿ ತಲಾ 12 ಲಕ್ಷ ರೂ.ಗಳಂತೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುದ್ದೇಬಿಹಾಳ ಪಟ್ಟಣದಲ್ಲಿರುವ ಅಂಬೇಡ್ಕರ್ ಸಮುದಾಯ ಭವನಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಿ ಶೀಘ್ರ ಉದ್ಘಾಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ಸಮುದಾಯ ಭವನದ ಸುತ್ತಮುತ್ತಲೂ ಅನೈತಿಕ ಚಟುವಟಿಕೆಗಳನ್ನು ನಡೆಸಲು ಪುಂಡಪೋಕರಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅಧಿಕಾರಿಗಳು ಸಮುದಾಯ ಭವನದಲ್ಲಿನ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಬಗ್ಗೆ ತ್ವರಿತವಾಗಿ ಕ್ರಮ ಜರುಗಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.