ವಿಜಯಪುರ: ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯೆಯ ಪತಿ ಹಾಗೂ ರೌಡಿಶೀಟರ್ವೊಬ್ಬರನ್ನು ದುಷ್ಕಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಗರದ ಚಂದಾಪುರ ಕಾಲೋನಿಯಲ್ಲಿ ನಡೆದಿದೆ. ಹೈದರ ಅಲಿ ನದಾಪ್ ಹತ್ಯೆಯಾದವರು. ಇವರ ಪತ್ನಿ ನಿಶಾತ್ ನದಾಪ್ ವಾರ್ಡ್ ನಂ19ರ ಪಾಲಿಕೆಯ ಸದಸ್ಯೆಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ರೌಡಿ ಶೀಟರ್ ಹೈದರ್ ನದಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಜಯಪುರ ನಗರದಲ್ಲಿ ಚಾಂದಪೂರ ಕಾಲೋನಿ ಬಳಿ ಇರುವ ತಮ್ಮ ನಿವಾಸದಿಂದ ಹೊರ ಬಂದು ಕಾರು ಹತ್ತುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿ ಕೊಳ್ಳಲು ಹೈದರ್ ಓಡಿ ಹೋಗಿದ್ದಾರೆ. ಆದ್ರೂ ಬೆನ್ನಟ್ಟಿದ್ದ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಪ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಪ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ಇವರು ತೊಡಗಿದ್ದರು.
ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ಆನಂದಕುಮಾರ, ಹೈದರ ಅಲಿ ಮೇಲೆ ರೌಡಿಶೀಟರ್ ಇತ್ತು. ಹತ್ಯೆ ಮಾಡಿದವರು ಸಹ ರೌಡಿಶೀಟರ್ಗಳಾಗಿದ್ದಾರೆ ಎಂಬದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈಗಾಗಲೇ ಹತ್ಯೆ ಬಗ್ಗೆ ತನಿಖೆ ನಡೆಸಲು ತಂಡ ರಚನೆ ಮಾಡಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವರ ಪತ್ನಿ ಸ್ಪರ್ಧಿಸಿ ಜಯ ಗಳಿಸಿದ್ದರು. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬ ಬಗ್ಗೆ ತನಿಖೆಯಿಂದ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.