ವಿಜಯಪುರ: ನಗರದಲ್ಲಿನ ಇಎಸ್‌ಐ ಆಸ್ಪತ್ರೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಟೇಷನ್ ರಸ್ತೆ ಹಿಂಭಾಗದಲ್ಲಿರುವ ಆಸ್ಪತ್ರೆಯಲ್ಲಿ ಮಾತ್ರೆಗಳು ಹಾಗೂ ವೈದ್ಯರ ಸೇವೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಹೆಬ್ಬಾರ್, ಇಎಸ್‌ಐ ಆಸ್ಪತ್ರೆಯಲ್ಲಿ ಯಾವುದೇ ತೊಂದರೆ ಅಥವಾ ಇನ್ನಾವುದೇ ಸೌಲಭ್ಯಗಳು ಅಗತ್ಯವೆನಿಸಿದರೆ ನನ್ನ ಗಮನಕ್ಕೆ ತರುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು. ಇನ್ನು ಕಾರ್ಮಿಕ ಕಾರ್ಡ್ ಹೊಂದಿರದ ಕಾರ್ಮಿಕರಿಗೂ ಸಹ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾನು ಪ್ರತೀ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿನ ಇಎಸ್‌ಐ ಆಸ್ಪತ್ರೆಗಳಿಗೆ ಭೇಟಿ ನೀಡುತ್ತೇನೆ, ಜೊತೆಗೆ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸುತ್ತೇನೆ. ರಾಜ್ಯಾದ್ಯಂತ ಇಎಸ್‌ಐ ಆಸ್ಪತ್ರೆಗಳಿಗೆ 400 ಕೋಟಿ ರೂ.ಗಳ ಮೆಡಿಸಿನ್ ಒದಗಿಸಲಾಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಸಚಿವರು ಹೇಳಿದರು.