ವಿಜಯಪುರ : ಕರ್ನಾಟಕ ಬಸ್‌ಗೆ ಬೆಂಕಿ ಹಾಕಿರುವುದಕ್ಕೂ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೋರಾಟಕ್ಕೂ ಸಂಬಂಧ ಇಲ್ಲ. ನಮ್ಮ ಬಸ್‌ಗೆ ಬೆಂಕಿ ಹಾಕಿರುವ ಕೃತ್ಯ ಸರಿ ಅಲ್ಲ. ಮಹಾರಾಷ್ಟ್ರ ಸರ್ಕಾರ ಇದನ್ನು ಖಂಡಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಕೆಲ ಕಿಡಿಗೇಡಿಗಳು ಕರ್ನಾಟಕದ ಸಾರಿಗೆ ಬಸ್‌ಗೆ ಬೆಂಕಿ ಹಚ್ಚಿದ್ದರು. ಈ ವಿಚಾರವಾಗಿ ವಿಜಯಪುರದಲ್ಲಿಂದು ಸಚಿವರು ಪ್ರತಿಕ್ರಿಯಿಸಿದರು. ಮಹಾರಾಷ್ಟ್ರ ಸರ್ಕಾರ ನಮ್ಮ ಬಸ್ಗಳಿಗೆ ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಬಸ್ಗಳು ನಮ್ಮ ರಾಜ್ಯಕ್ಕೂ ಬರುತ್ತವೆ. ಅಲ್ಲದೆ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಕ್ಕೂ ಹೋಗುತ್ತವೆ. ಇದು ನೆನಪಿನಲ್ಲಿರಲಿ ಎಂದು ಎಚ್ಚರಿಕೆ ರವಾನಿಸಿದರು.
ನಮಗೂ ಅವರಿಗೂ ಯಾವುದೇ ಜಗಳ ಇಲ್ಲ ಹಾಗೂ ಹೋರಾಟಕ್ಕೂ ನಮಗೂ ಸಂಬಂಧವೇ ಇಲ್ಲ. ಮೀಸಲಾತಿ ಹೋರಾಟ ಅವರ ಆಂತರಿಕ ವಿಚಾರವಾಗಿದೆ. ಹೀಗಾಗಿ ಅವರ ಆಂತರಿಕ ವಿಚಾರಕ್ಕೂ ಕರ್ನಾಟಕ ಬಸ್‌ಗೆ ಬೆಂಕಿ ಹಾಕೋದಕ್ಕು ಸಂಬಂಧವೇ ಇಲ್ಲ. ಹೋರಾಟ ಮಾಡೋರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಒಂದು ಹೊಸ ಬಸ್ ಖರೀದಿ ಮಾಡಿಲ್ಲ. ಕೊನೆ ವರ್ಷದಲ್ಲಿ ಹೊಸ ಬಸ್ ಖರೀದಿಗೆ ಅವರು ತೀರ್ಮಾನ ಮಾಡಿದ್ದರು. ಆದರೆ ತೀರ್ಮಾನ ತಗೊಂಡಿದ್ದು, ಕಾರ್ಯಗತ ಆಗೋದು ತಡವಾಗಿದ್ದು, ಈಗ ಬಸ್ಗಳು ಬರುತ್ತಿವೆ. ಇಲಾಖೆಯಲ್ಲಿ 13,888 ಜನ ನಿವೃತ್ತಿ ಹೊಂದಿದ್ದರು, ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರೋದು ಬಿಟ್ಟರೆ ಮತ್ತೆ ನೇಮಕಾತಿ ಆಗಿಲ್ಲ. ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಏನು ಮಾಡಲಿಲ್ಲ. ಕೊರೊನಾ ಸಮಯದಲ್ಲಿ 3800 ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದರು. ಹೀಗಾಗಿ ಡ್ರೈವರ್ ಕೊರತೆ ಆಗುತ್ತೆ.
ಈಗ 5500 ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಮೊನ್ನೆ 13,800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ. ಆದರೆ 8 ಸಾವಿರ ಬಸ್ ಖರೀದಿಗೆ ಅನುಮತಿ ಕೊಟ್ಟಿದ್ದಾರೆ. ಈಗ ಆ ಪ್ರಕ್ರಿಯೆ ಆರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ ಹೊಸ ಬಸ್ಗಳು ಬರುತ್ತವೆ. ಜೊತೆಗೆ 8 ಸಾವಿರ ಸಿಬ್ಬಂದಿಗಳ ಸಹ ನೇಮಕಾತಿ ಆಗುತ್ತದೆ. ಡ್ರೈವರ್ ಕೊರತೆನೂ ದೂರವಾಗುತ್ತೆ. ಕ್ಯಾನ್ಸಲ್ ಆಗಿದ್ದ ಶೆಡ್ಯೂಲ್ಗಳನ್ನು ಆರಂಭಿಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಮೊದಲು ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಹೇಳಿ. ಬಿಜೆಪಿ ಸೋತು ಸುಣ್ಣವಾಗಿ ಹೋಗಿದೆ ಎಂದು ಚಾಟಿ ಬೀಸಿದರು. ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ವಿಚಾರಕ್ಕೆ ದುಬೈನೂ ಇಲ್ಲ, ಯಾವುದೂ ಇಲ್ಲ. ಸರ್ಕಾರ 10 ವರ್ಷ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ತನ್ನ ಪ್ರಭಾವ ಕಡಿಮೆ ಮಾಡಿಕೊಂಡಿದೆ : ನಗರದಲ್ಲಿ ಮತ್ತೊಂದೆಡೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು 17 ಶಾಸಕರನ್ನು ಖರೀದಿ ಮಾಡಿ ಬಿಜೆಪಿಯವರು ತೆಗೆದುಕೊಂಡರಲ್ಲ, ಆ ಕಾರಣಕ್ಕೆ ಬಿಜೆಪಿ ಇಂದು ದೇಶದಲ್ಲೇ ತನ್ನ ಪ್ರಭಾವ ಕಡಿಮೆ ಮಾಡಿಕೊಂಡಿದೆ. ರಾಜಕಾರಣ ಅಂದರೆ ಸರ್ಕಾರ ಬೀಳಿಸುವುದು, ಸರ್ಕಾರ ಮಾಡುವುದು, ಸ್ಥಿರ ಸರ್ಕಾರವನ್ನು ಜಗ್ಗುವುದು, ಶಾಸಕರನ್ನು ಖರೀದಿ ಮಾಡುವುದು ರಾಜಕಾರಣನಾ? ಈ ರೀತಿ ಮಾಡುವುದು ಜನರಿಗೆ ಮಾಡುವ ಅವಮಾನ, ಪ್ರಜಾಪ್ರಭುತ್ವಕ್ಕೆ ಮಾಡುವಂತಹ ಮೋಸ. ಜನರು ಈ ರೀತಿ ಮೋಸ ಮಾಡುವುದನ್ನು ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಮಹಾರಾಷ್ಟ್ರದ ಜತ್ತ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆತ: ಪ್ರಯಾಣಿಕರಿಗೆ ಗಾಯ