ವಿಜಯಪುರ : ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಡಿಜೆ - ಕೆಜಿಹಳ್ಳಿ ಸೇರಿದಂತೆ ವಿವಿಧೆಡೆ ನಡೆದ ಗಲಭೆ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಇದು ಸಹಜ ಪ್ರಕ್ರಿಯೆಯಾಗಿದೆ. ಈಗಾಗಲೇ ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ವಿಜಯಪುರದಲ್ಲಿ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ, ಮಂಗಳೂರು ಗಲಭೆ ಆರೋಪಿಗಳ ಮೇಲಿನ ಪ್ರಕರಣ ಕೈ ಬಿಡುವಂತೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ನಿರಪರಾಧಿಗಳಿಗೆ ತೊಂದರೆ ಆಗಬಾರದು ಎಂದು ಹೇಳಿದರು. ತನಿಖೆ ನಡೆದ ಬಳಿಕ ಯಾರು ಅಮಾಯಕರು, ಅಪರಾಧಿಗಳು ಗೊತ್ತಾಗುತ್ತೆ. ಅಪರಾಧಿಗಳು ಯಾರೆ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದರು.
ಯಾರು ಅಪರಾಧಿಗಳು ಅವರಿಗೆ ಶಿಕ್ಷೆ ಆಗುತ್ತೆ: ನಿರಪರಾಧಿಗಳಿದ್ದರೆ ಯಾವುದೇ ಪಕ್ಷ, ಜಾತಿ, ಧರ್ಮ ನೋಡದೇ ಯಾರೇ ಇದ್ದರೂ ಅವರಿಗೆ ಅನ್ಯಾಯವಾಗಬಾರದು. ಆ ದಿಸೆಯಲ್ಲಿ ಗೃಹ ಸಚಿವರು ಕೆಲಸ ಮಾಡ್ತಾರೆ ಎಂದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ ಹಾಗೆ ನಮ್ಮ ಸರ್ಕಾರ ನಡೆಯುವುದಿಲ್ಲ. ಯತ್ನಾಳ್ ಹೇಳಿದಂತೆ ನಾವು ನಡೆಯಬೇಕು ಅಂತಾ ಏನೂ ಇಲ್ಲ. ಯಾರು ಅಪರಾಧಿಗಳು ಅವರಿಗೆ ಶಿಕ್ಷೆ ಆಗುತ್ತೆ. ಯಾರು ನಿರಪರಾಧಿಗಳಿಗೆ ಅನ್ಯಾಯವಾಗಲ್ಲ ಎಂದು ಹೇಳಿದರು.
ಪ್ರಕರಣ ಕುರಿತು ಬಿಜೆಪಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಂಬಿಪಿ, ಪೊಲೀಸರ ನೈತಿಕತೆ ಏನಾಗುತ್ತೆ ಎಂದು ಕೇಳುವ ಬಿಜೆಪಿಯ ಹಿಂದಿನ ಗೃಹ ಸಚಿವರು ಪೊಲೀಸರ ಬಗ್ಗೆ ಏನ್ ಮಾತನಾಡಿದರು ಗೊತ್ತಾ? ಎಂದು ಪ್ರಶ್ನಿಸಿದರು. ಪೊಲೀಸರ ಬಗ್ಗೆ ಏನು ಶಬ್ಧ ಪ್ರಯೋಗಿಸಿದ್ದರು ಗೊತ್ತಾ?. ಹಿಂದಿನ ಸರ್ಕಾರದ ಗೃಹ ಸಚಿವರು ಪೊಲೀಸರಿಗೆ ನಾಯಿಗಳು ಎಂದಿದ್ದರು.
ಹೆಡ್ಕಾನ್ಸ್ಟೇಬಲ್ ಹಿಡಿದು ಪೊಲೀಸ್ ಅಧಿಕಾರಿಗಳವರೆಗೂ ಗೌರವ ಇದೆ: ಒಬ್ಬ ಪೊಲೀಸ್ ತಪ್ಪು ಮಾಡಿದ್ದಕ್ಕೆ ಎಲ್ಲ ಪೊಲೀಸರಿಗೆ ನಿಂದಿಸಿದ್ದರು. ನಾನು ಕೂಡ ಗೃಹ ಸಚಿವನಾಗಿದ್ದವನು. ಪೊಲೀಸರಿಗಾಗಿ ಔರಾದಕರ್ ವರದಿ ಜಾರಿಗೆ ಪ್ರಯತ್ನಿಸಿದ್ದೆ. ಈಗಲೂ ಅದಕ್ಕೆ ಬದ್ಧವಾಗಿದ್ದೇನೆ. ಒಬ್ಬ ಪೊಲೀಸರ ಬಗ್ಗೆ ಅಪಾರ ಗೌರವ ಇದೆ. ಹೆಡ್ಕಾನ್ಸ್ಟೇಬಲ್ ಹಿಡಿದು ಪೊಲೀಸ್ ಅಧಿಕಾರಿಗಳವರೆಗೂ ಗೌರವ ಇದೆ. ನಾವೆಲ್ಲ 8 ಗಂಟೆ ಕೆಲಸ ಮಾಡಿದರೆ, ಪೊಲೀಸರು ದಿನದ 24 ಗಂಟೆಯು ಕೆಲಸ ಮಾಡುತ್ತಾರೆ. ನಾವು ಹಬ್ಬ ಮಾಡ್ತಿದ್ರೆ ಪೊಲೀಸರು ಡ್ಯೂಟಿ ಮಾಡ್ತಿರ್ತಾರೆ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ ಎಂದರು.
ಇದನ್ನೂ ಓದಿ: ಕೆಐಎಡಿಬಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು: ಸರ್ಕಾರದಿಂದ ಸುತ್ತೋಲೆ ಪ್ರಕಟ