ವಿಜಯಪುರ:ಮಾಜಿ ಸಿಎಂ ಕುಮಾರಸ್ವಾಮಿ RSS ಚಡ್ಡಿ ಹಾಕಿದ್ದಾನೆ ಎಂಬ ಜಮೀರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಜಮೀರ್ ಒಂದು ಪಕ್ಷದ ನಿಷ್ಠೆ, ಗಟ್ಟಿ ಇಲ್ಲದೇ ಇರುವವನು ಒಳಗಡೆ ಚಡ್ಡಿ ಇದೆಯೋ ಇಲ್ಲವೋ ಎಂದು ಮಾತನಾಡುತ್ತಾನೆ ಎಂದರು.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಚುನಾವಣೆ ಪ್ರಚಾರಕ್ಕೆ ಯಂಕಂಚಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜಮೀರ್ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ ಎಂದು ಗರಂ ಆದ ಅವರು, ರಾಜಕಾರಣದಲ್ಲಿ ಮಾತಿಗೂ ಕೂಡ ಲೆಕ್ಕ ಬೇಕು. ಹಲವು ವರ್ಷಗಳ ಆಡಳಿತ ನಡೆಸಿರುವ ಕಾಂಗ್ರೆಸ್ ಈಗ ಹಲವು ರಾಜ್ಯಗ ಳಲ್ಲಿ ನಿರ್ನಾಮ ಆಗಿದೆ ಎಂದರು.
ಕಾಂಗ್ರೆಸ್ ಎರಡು ಹೋಳಾಗುತ್ತೆ:
ಬೈ ಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತೆ ಎಂದು ಭವಿಷ್ಯ ನುಡಿದರು. ಒಂದು ಸಿದ್ದರಾಮಯ್ಯ, ಇನ್ನೊಂದು ಡಿಕೆಶಿ ಬಣ. ಸಿದ್ದರಾಮಯ್ಯ ಮತ್ತು ಡಿಕೆಶಿಯವರು ಒಂದೇ ಪಕ್ಷದಲ್ಲಿ ಇರಲ್ಲ ಎಂದರು. ಡಿಕೆಶಿ ಅವರ ಬಗ್ಗೆ ಅವರ ಪಕ್ಷದ ಮುಖಂಡ ಉಗ್ರಪ್ಪ ಮಾತಾಡಿದ್ರೂ, ಈ ವಿಚಾರವಾಗಿ ಸಿದ್ದರಾಮಯ್ಯ ಒಂದು ಮಾತು ಹೇಳಲಿಲ್ಲ ಎಂದು ಟೀಕಿಸಿದರು.
ಕಂಬಳಿಯನ್ನು ರಾಜಕಾರಣಕ್ಕೆ ತರಬೇಡಿ:
ಬಿಜೆಪಿಗರಿಗೆ ಕಂಬಳಿ ಹಾಕಿಕೊಳ್ಳುವ ಯೋಗ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪಿಸಿದ ಅವರು, ಕನಕದಾಸರು, ಸಂಗೊಳ್ಳಿ ರಾಯಣ್ಣ, ಅನೇಕ ಮಹಾ ಪುರುಷರು ಕಂಬಳಿ ಹಾಕಿಕೊಂಡಿದ್ದಾರೆ. ಕಂಬಳಿ ಪವಿತ್ರವಾದ ಸಂಕೇತ, ಕುಂಕುಮ ಕೂಡ ಪವಿತ್ರವಾದ ಸಂಕೇತ. ಕಂಬಳಿಯನ್ನು ರಾಜಕಾರಣಕ್ಕೆ ತರಬೇಡಿ ಎಂದು ಸಿದ್ದರಾಮಯ್ಯ ಕಾಲಿಗೆ ಬಿದ್ದು ಕೇಳ್ತಿನಿ ಎಂದರು.
ನಾನು ಕುರುಬ ಹೌದು:
ಈಶ್ವರಪ್ಪ ಕುರುಬನೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕನಕದಾಸರ ಹೆಸರು ಹೇಳೋಕೆ ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ. ಕನಕದಾಸ ಜಯಂತಿ ಮಾಡುವ ಯೋಗ್ಯತೆ ಸಿದ್ದರಾಮಯ್ಯಗೆ ಇರಲಿಲ್ಲ. ನಾನು ಕುರುಬ ಹೌದು, ಅಲ್ಲ, ಎಂಬುದು ತೀರ್ಮಾನ ಮಾಡುವುದು ರಾಜಕಾರಣ ವೇದಿಕೆಯಲ್ಲಿ ಅಲ್ಲ. ಜಾತಿ ಇರುವುದು ಸಂಸ್ಕಾರ ಮತ್ತು ವ್ಯವಸ್ಥೆಗಾಗಿ.. ನಾನು ಕುರುಬ ಹೌದು ಅದಕ್ಕಿಂತ ವಿಶೇಷವಾಗಿ ಹಿಂದುತ್ವವಾದಿ ಎಂದರು.