ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಉತ್ಪಾದಕರಿಗೆ ವಿಶೇಷ ಕೊಡುಗೆ ನೀಡಿದೆ. ಹಾಲು ಖರೀದಿಗೆ ಪ್ರೋತ್ಸಾಹಧನ ರೂಪದಲ್ಲಿ ಪ್ರತಿ ಲೀಟರ್ ಆಕಳು ಹಾಲಿಗೆ 3ರೂ ಹಾಗೂ ಎಮ್ಮೆ ಹಾಲಿಗೆ 2ರೂ. ಹೆಚ್ಚಳ ಮಾಡಿದೆ. ಈ ಬಗ್ಗೆ ವಿಜಯಪುರ- ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ ಮಾಹಿತಿ ನೀಡಿದ್ದಾರೆ.
ಈ ಆದೇಶ ಇಂದಿನಿಂದಲೇ ಜಾರಿಯಾಗಿದ್ದು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಒಕ್ಕೂಟಕ್ಕೆ ಪ್ರತಿ ವರ್ಷ 1.5 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಇತ್ತೀಚಿಗೆ ನಡೆದ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹೊಸ ದರದಿಂದ ಹಾಲು ಉತ್ಪಾದಕರ ಸಂಘಗಳಿಗೆ ಆಕಳು ಹಾಲಿಗೆ ಕನಿಷ್ಠ ಪ್ರತಿ ಲೀಟರ್ ಗೆ 30.45 ರೂ ಹಾಗೂ ಎಮ್ಮೆ ಹಾಲಿಗೆ 43.55ರೂ. ಪಾವತಿಸಲಾಗುವುದು. ನಂದಿನ ಹಾಲು ಖರೀದಿಸುವ ಗ್ರಾಹಕರಿಗೆ ಹಾಲಿನ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ, ಕೇವಲ ಹಾಲು ಉತ್ಪಾದಕರಿಗೆ ಮಾತ್ರ ಪ್ರೋತ್ಸಾಹಧನದ ರೂಪದಲ್ಲಿ ಈ ದರ ಹೆಚ್ಚಳ ಮಾಡಲಾಗಿದೆ ಎಂದರು.
ಇದನ್ನೂ ಓದಿ: ವಿಶೇಷಚೇತನರಿಗೆ ಬಿಎಂಟಿಸಿಯಿಂದ ಶೀಘ್ರದಲ್ಲೇ ವಿಶೇಷ ಬಸ್ ಸೇವೆ ಆರಂಭ