ವಿಜಯಪುರ: ತಿಡಗುಂದಿ ಶಾಖಾ ಕಾಲುವೆಗೆ ನೀರು ಹರಿಸಿದ ಫಲವಾಗಿ ಅರಕೇರಿ ಹಾಗೂ ಸಿದ್ದಾಪುರದ ಹಳ್ಳ - ಕೊಳ್ಳಗಳು ತುಂಬಿ ಹರಿಯುತ್ತಿವೆ. ತಮ್ಮ ಗ್ರಾಮಗಳಿಗೆ ನೀರು ಬರುತ್ತಿರುವುದನ್ನು ಕಂಡ ನೂರಾರು ರೈತರು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಜಲಸೇತುವೆ ಮೂಲಕ ಜಿಲ್ಲೆಯ ನಾಗಠಾಣಾ, ಬಬಲೇಶ್ವರ ಹಾಗೂ ವಿಜಯಪುರ ಮತ ಕೇತ್ರದ ಸುಮಾರು 19 ಕೆರೆಗಳನ್ನು ತುಂಬಿಸುವ ಹಾಗೂ ಕೃಷಿಗೆ ನೀರಾವರಿ ಅನುಕೂಲವಾಗುವಂತೆ ಕಳೆದ ಒಂದು ವಾರದ ಹಿಂದೆ ಎಂ.ಬಿ. ಪಾಟೀಲ್ ಗಂಗಾ ಪೂಜೆ ನೆರವೇರಿಸುವ ಮೂಲಕ ತಿಡಗುಂದಿ ಶಾಖಾ ಕಾಲುವೆಗೆ ನೀರು ಹರಿಸಿದ್ದರು.
ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದ್ದ ಪ್ರದೇಶಗಳಲ್ಲಿ ಇದೀಗ ನೀರು ಹರಿಯುತ್ತಿದ್ದು ಹೀಗಾಗಿ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನೀರು ಹರಿಯುತ್ತಿರುವ ಸ್ಥಳದಲ್ಲಿ ರೈತರು ಎಂ.ಬಿ. ಪಾಟೀಲ್ ಭಾವಚಿತ್ರವಿಟ್ಟು ಕೃತಜ್ಞತಾ ಮನೋಭಾವದಿಂದ ಬಿಂದಿಗೆಗಳಲ್ಲಿ ಹಾಲು ತಂದು ಅಭಿಷೇಕ ಮಾಡಿದ್ದಾರೆ.