ವಿಜಯಪುರ: ಭಾರತ-ಚೀನಾ ನಡುವಿನ ಯುದ್ಧದ ವಾತಾವರಣದಿಂದಾಗಿ ಈಗಾಗಲೇ ನಮ್ಮ 20 ಯೋಧರನ್ನು ಕಳೆದುಕೊಂಡಿದ್ದೇವೆ. ಅವರ ವೀರ ಮರಣಕ್ಕೆ ಚೀನಾಗೆ ತಕ್ಕ ಉತ್ತರ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ನಿಯೋಜಿಸಿ ಸೈನ್ಯ ಬಲಪಡಿಸಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗೆ ನೀರೆರೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಸದ್ಯ ಯುದ್ಧದ ಕಾರ್ಮೋಡದ ನಡುವೆ ಏನು ಚರ್ಚೆ ನಡೆಸಬೇಕು ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ಇರಬೇಕು. ಇಂತಹ ಸೂಕ್ಷ್ಮ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಮಾಜಿ ಸೇನಾಧಿಕಾರಿಗಳು, ನಿವೃತ್ತ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪ್ರಧಾನಿಗಳು ತೆಗೆದುಕೊಂಡು ಮುನ್ನಗ್ಗಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪ್ರಧಾನಿಯವರ ಜತೆಗೆ ಇವೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದರು.
ಇದು ಸೂಕ್ಷ್ಮ ವಿಚಾರವಾಗಿರುವ ಕಾರಣ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಚೀನಾ ಬಲಿಷ್ಠ ರಾಷ್ಟ್ರವಾಗಿದೆ. ಈಗಾಗಲೇ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳನ್ನು ಹಿಂದಿಕ್ಕಲಾಗಿದೆ. ಪ್ರಧಾನಿಗಳು ನಿವೃತ್ತ ಸೇನಾಧಿಕಾರಿಗಳ ಸಹಾಯ ಪಡೆದುಕೊಂಡು ಚೀನಾದ ಮೇಲೆ ವಿಜಯ ಸಾಧಿಸಬೇಕು. ಈ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂದರು.