ವಿಜಯಪುರ: ಮುದ್ದೇಬಿಹಾಳ ತಾಲೂಕಿನಲ್ಲಿ ಕಳೆದ 6 ದಿನಗಳಿಂದ ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಪ್ರಚಾರ ಮುಂದುವರೆಸಿದ್ದು, ಇಂದು ಕೋಳೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಮತಯಾಚನೆ ಮಾಡಿದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಟಿ ನಡೆಸಿದ ಎ ಎಸ್ ಪಾಟೀಲ್ ನಡಹಳ್ಳಿ, ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದರು. ಮುಳವಾಡ ಏತ ನೀರಾವರಿ ಯೋಜನೆ ಅಡಿಯಲ್ಲಿ ಎಂ.ಬಿ ಪಾಟೀಲ್ ತಮ್ಮ ಬಬಲೇಶ್ವರ್ ಕ್ಷೇತ್ರದ 3 ಕೆರೆಗಳನ್ನು ಭರ್ತಿ ಮಾಡಿಕೊಂಡಿದ್ದರೇ ಹೊರತು, ಇತ್ತ ಮುದ್ದೇಬಿಹಾಳ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಾಸಕನಾದ ಬಳಿಕ ನನ್ನ ವ್ಯಾಪ್ತಿಗೆ ಬರುವ 18 ಕೆರೆಗಳನ್ನು ತುಂಬುವ ಕೆಲಸ ಮಾಡಿದ್ದೇನೆ. ಶಿವಾನಂದ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಮೀಟಿಂಗ್‌ನಲ್ಲಿ ಎಂಬಿ ಪಾಟೀಲ್ ಅವರು ಅವೈಜ್ಞಾನಿಕವಾಗಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶದಿಂದ ನೀರು ಹರಿಬಿಟ್ಟಿದ್ದರ ಬಗ್ಗೆ ಗಮನಸೆಳೆದಿದ್ದೆ ಎಂದರು.
ಈಗಾಗಲೇ ನಮ್ಮ ಆಲಮಟ್ಟಿ ಜಲಾಶಯದಲ್ಲಿ 39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ ಬರೀ 4 ಟಿಎಂಸಿ ನೀರು ನಮ್ಮ ಕಾಲುವೆಗಳಿಗೆ ಹರಿಬಿಟ್ಟರೆ ನಮ್ಮ ಕೆರೆಗಳು ತುಂಬುತ್ತವೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಎಲ್ಲಾ ಕಾಲುವೆಗಳಿಗೆ ಎರಡು ಬಾರಿ ನೀರು ಹರಿಬಿಡುವಂತೆ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಎಂ.ಬಿ ಪಾಟೀಲ್ ಬಗ್ಗೆ ಮತ್ತೆ ವಾಕ್‌ಸಮರ ಮುಂದುವರೆಸಿದ ಅವರು ಅವರನ್ನು 'ಪರ್ಸಂಟೇಜ್ ಭಗೀರಥ' ಎಂದು ಟೀಕಿಸಿದರು. ಜಲಸಂಪನ್ಮೂಲ ಸಚಿವರಿದ್ದಾಗ ಅವರು ಮುಳವಾಡ ಏತ ನೀರಾವರಿ ಯೋಜನೆಯಡಿ ಕಾಲುವೆಗಳ ದುರಸ್ತಿಗೆ ಕರೆದ ಟೆಂಡರ್ಗಳಿಗೆ ಎಲ್ಲಾ ರೀತಿಯಿಂದ ಪರ್ಸ್ಂಟೇಜ್ ಫಿಕ್ಸ್ ಮಾಡಿದ್ರು ಎಂದು ಆರೋಪಿಸಿದರು.