ವಿಜಯಪುರ: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದಾಳಿಂಬೆ ಬೆಳೆಗೆ ದುಂಡಾಣು (ಕ್ಯಾರ) ರೋಗ ತಗುಲಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ಪ್ರತಿ ವರ್ಷವೂ ಈ ರೋಗದ ಕಾಟ ದಾಳಿಂಬೆ ಬೆಳೆಗೆ ಇದ್ದೇ ಇರುತ್ತದೆ. ಈ ವರ್ಷ ಮತ್ತಷ್ಟು ಹಾನಿ ಸಂಭವಿಸಿದ್ದು, ದಾಳಿಂಬೆ ಬೆಳೆಗಾರರ ನೆಮ್ಮದಿಯನ್ನೇ ಕಸಿದಿದೆ. ಈ ರೋಗದಿಂದಾಗಿ ದಾಳಿಂಬೆಯ ಮೇಲಿನ ಪದರ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೆಲವು ಎರಡು ಭಾಗವಾಗಿ ಒಡೆದು ಹೋಗುತ್ತಿವೆ. ಇನ್ನು, ದಾಳಿಂಬೆಗೆ ದುಂಡಾಣು ರೋಗ ತಗುಲಿರುವುದರಿಂದ ವ್ಯಾಪಾರಸ್ಥರು ಖರೀದಿಗೆ ಆಗಮಿಸುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದಾಳಿಂಬೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ವಿಜಯಪುರ ಜಿಲ್ಲೆಯನ್ನು ದ್ರಾಕ್ಷಿ, ಲಿಂಬು ಕಣಜ ಎಂದೂ ಸಹ ಕರೆಯುತ್ತಾರೆ. ಇದರ ಜೊತೆಗೆ ದಾಳಿಂಬೆಯನ್ನೂ ಸಹ ಹೆಚ್ಚು ಬೆಳೆಯಲಾಗುತ್ತಿದೆ. ದುಂಡಾಣು ರೋಗದಿಂದಾಗಿ ಈ ಬಾರಿ ಇಂಡಿ ತಾಲೂಕಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದಾಳಿಂಬೆ ಸಂಪೂರ್ಣ ನಾಶವಾಗಿದೆ. ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬೆಳೆಗಾರರು.