ವಿಜಯಪುರ: ಮಂಗಳೂರು ಗಲಭೆ ವಿಚಾರದಲ್ಲಿ ಕರ್ನಾಟಕ ಪೊಲೀಸರು ಜಾಗೃತಿವಹಿಸಿ ಅನಾಹುತ ತಪ್ಪಿಸಿದ್ದಾರೆ. ಹಾಗಾಗಿ ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ನಡೆದ ಹಿಂಸಾಚಾರಕ್ಕೆ ಪಿಎಫ್ಐ ಸೇರಿದಂತೆ ದೇಶ ವಿರೋಧಿಗಳ ಕುಮ್ಮಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿಗಳ ವರ್ತನೆ ನೋಡಿದ್ದೇವೆ. ಘಟನೆಯನ್ನು ನಿಯಂತ್ರಿಸಲು ಗುಂಡು ಹಾರಿಸಿದ್ದಾರೆ. ಇನ್ನು ಗಲಭೆಯಲ್ಲಿ ಮೃತಪಟ್ಟರು ಅಮಾಯಕರಲ್ಲ, ದೇಶಭಕ್ತರೂ ಅಲ್ಲ. ಅವರ ಕುಟುಂಬಸ್ಥರಿಗೆ ನೀಡಿರುವ ಪರಿಹಾರ ಹಣ 10 ಲಕ್ಷ ರೂಪಾಯಿಯನ್ನು ಸಿಎಂ ವಾಪಸ್ ಪಡೆಯಬೇಕು. ದೇಶಭಕ್ತರಿಗೆ, ಗೋ ರಕ್ಷಕರಿಗೆ ಈ ಪರಿಹಾರ ಹಣ ಕೊಡಬೇಕು. ಗಲಭೆಯಲ್ಲಿ ಬಂದವರಿಗೆ ಪರಿಹಾರ ಕೊಡುವುದನ್ನು ನಿಲ್ಲಿಸಬೇಕು ಎಂದರು.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು. ಅವರೇನು ಘನಂದಾರಿ ಕೆಲಸ ಮಾಡಿದ್ದಾರೆ ಎಂದು 5 ಲಕ್ಷ ಪರಿಹಾರ ಕೊಡ್ತಾರೆ ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾದಾಮಿ ಬಿಟ್ಟು ಬಾರದ ಸಿದ್ದರಾಮಯ್ಯ, ಪ್ರಾಣ ಹೋದ್ರೂ ಪರವಾಗಿಲ್ಲ ಎಂದು ಸಿನಿಮಾ ಡೈಲಾಗ್ ಹೇಳ್ತಾರೆ ಎಂದು ಯತ್ನಾಳ್ ಹರಿಹಾಯ್ದರು.
ಇನ್ನು ಸಮಾಜಘಾತುಕರಿಗೆ ಬೆಂಬಲ ಕೊಡುವ ಎರಡೂ ರಾಜಕೀಯ ಪಕ್ಷಗಳ ನಾಯಕರು ಪೊಲೀಸ್ ಇಲಾಖೆಗೆ ಕ್ಷಮೆ ಕೇಳಬೇಕು. ಹಾಗೆ ಮಾಜಿ ಸಚಿವ ಯು. ಟಿ. ಖಾದರ್ ವಿರುದ್ಧ ತನಿಖೆ ಆಗಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ರು.