ವಿಜಯಪುರ: ಆಯುಧ ಪೂಜೆ ದಿನ ಪೊಲೀಸರು ಕೇಸರಿ ಶಾಲು ಧರಿಸಿದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಕುರಿತು ಸಿಂದಗಿ ಉಪಚುನಾವಣೆ ಪ್ರಚಾರದ ವೇಳೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದೊಂದು ಕೇವಲ ಆರೋಪವಲ್ಲ ಫೋಟೋಗಳನ್ನು ಸಹ ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಬಿಜೆಪಿ ಸರ್ಕಾರ ಪೊಲೀಸ್ ಠಾಣೆಗಳನ್ನು ಸಹ ಕೇಸರೀಕರಣ ಮಾಡುತ್ತಿರುವುದು ಖಂಡನೀಯ ಎಂದರು.
ಸರ್ಕಾರಿ ನೌಕರರು ಕೇಸರಿಕರಣ ಮಾಡಿದರೆ ಸರಿಯಲ್ಲ. ಬಿಜೆಪಿ ಚುನಾವಣೆಯಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲಿ, ಠಾಣೆಯಲ್ಲಿ ಕೇಸರಿ ಟೋಪಿ, ಕೇಸರಿ ಬಟ್ಟೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು. ಇನ್ಮುಂದೆ ಪೊಲೀಸರ ಖಾಕಿ ತೆಗೆಸಿ ಬಿಡುತ್ತಾರಾ ಎಂದು ಖರ್ಗೆ ಪ್ರಶ್ನಿಸಿದರು. ಪೊಲೀಸ್ ಠಾಣೆಯಲ್ಲಿ ಕೇಸರಿ ಬಾವುಟ ಹಿಡಿದು ಓಡಾಡಿದರೆ ಕ್ರಿಮಿನಲ್ಗಳಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನೈತಿಕ್ ಪೊಲೀಸಗಿರಿ ಹೆಚ್ಚಾಗಿರುವುದಕ್ಕೆ ಇಂಥ ಘಟನೆಗಳೇ ಕಾರಣವಾಗಿವೆ. ಕೇಸರಿಕರಣ ಮೂಲಕ ರಾಜ್ಯದಲ್ಲಿ ನೈತಿಕ ಪೊಲೀಸಗಿರಿಗೆ ಕುಮ್ಮಕ್ಕು ನೀಡಿದಂತಾಗುತ್ತಿದೆ. ಮೊದಲು ಪೊಲೀಸ್ ಠಾಣೆಯಲ್ಲಿ ಈ ರೀತಿ ಹಬ್ಬ ನಡೆಯುತ್ತಿರಲಿಲ್ಲ. ಇಂಥ ಬೆಳವಣಿಗೆಗಳು ಜನರ ಮನಸ್ಸಿನಲ್ಲಿ ಅಸಹ್ಯ ಉಂಟು ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.