ವಿಜಯಪುರ: ಮಹಾಮಾರಿ ಕೊರೊನಾ ಅಬ್ಬರದ ನಡುವೆಯೂ ವಿಜಯಪುರದಲ್ಲಿ ಸಂಭ್ರಮ-ಸಡಗರದಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಗುಮ್ಮಟ ನಗರಿ ಹೊರವಲಯದ ಸಿಂದಗಿ ರಸ್ತೆಯಲ್ಲಿರುವ ಶಿವಗಿರಿಯ ಬೃಹತ್ ಶಿವನ ಮೂರ್ತಿ, ರೈಲ್ವೆ ಸ್ಟೇಷನ್ ರಸ್ತೆಯ ಸುಂದರೇಶ ದೇವಸ್ಥಾನ ಹಾಗೂ ಬಿಎಲ್ಡಿಇ ಸಂಸ್ಥೆಯ ಆವರಣದ 770 ಲಿಂಗಗಳ ದರ್ಶನ ಮಾಡಲು ಭಕ್ತರು ಮುಗಿಬಿದ್ದಿದ್ದರು.
ಶಿವಗಿರಿಯಲ್ಲಿನ 85 ಅಡಿ ಶಿವನ ಮೂರ್ತಿ ವೀಕ್ಷಿಸಿ, ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬಂದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಶಿವರಾತ್ರಿಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದ್ದು, ಭಕ್ತರ ಆಗಮನಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಭಕ್ತರು ಮಾಸ್ಕ್ ಹಾಕಿರುವ ಕುರಿತು ಹೆಚ್ಚಿನ ಗಮನ ಹರಿಸಲು ಮಾರ್ಷಲ್ಗಳನ್ನು ನೇಮಿಸಲಾಗಿತ್ತು. ಜೊತೆಗೆ ಮುಖ್ಯ ದ್ವಾರದಲ್ಲಿ ಸ್ಯಾನಿಟೈಸರ್ ಯಂತ್ರ ಅಳವಡಿಸಲಾಗಿತ್ತು. ಶಿವನಮೂರ್ತಿ ಪಾದದಡಿ ಲಿಂಗ ಪೂಜೆ ನೆರವೇರಿಸಲಾಗಿದ್ದು, ಸರತಿ ಸಾಲಿನಲ್ಲಿ ನಿಂತು ಭಕ್ತರು ಪರಮೇಶ್ವರನ ದರ್ಶನ ಪಡೆದರು.
ಓದಿ: ಮಹಾ ಶಿವರಾತ್ರಿ ಸಂಭ್ರಮ.. ದೇಶದ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಿರಿ
ನಗರದ ರೈಲ್ವೆ ಸ್ಟೇಷನ್ ರಸ್ತೆಯ ಸುಂದರೇಶ್ವರ ದೇವಸ್ಥಾನದಲ್ಲಿಯೂ ಚಕ್ರೇಶ್ವರ ಶಿವಲಿಂಗನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಲಿಂಗದ ಮೇಲೆ ಚಕ್ರವಿರುವ ದೇಶದ ಕೆಲವೇ ಕೆಲವು ದೇವಸ್ಥಾನದಲ್ಲಿ ವಿಜಯಪುರದ ಸುಂದರೇಶ್ವರ ದೇವಸ್ಥಾನ ಸಹ ಒಂದಾಗಿದೆ. ಇನ್ನು ನಗರದ ಬಿಎಲ್ಡಿಇ ಸಂಸ್ಥೆಯ ಆವರಣದಲ್ಲಿರುವ 770 ಶಿವಲಿಂಗಗಳ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದರು. ಇದೇ ವೇಳೆ ಅದ್ದೂರಿ ರಥೋತ್ಸವ ಜರುಗಿದ್ದು, ಪೊಲೀಸ್ ಭದ್ರತೆಯಲ್ಲಿ ಶಿವರಾತ್ರಿ ಆಚರಣೆ ದಿನ ನೀಡುವ ಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.