ವಿಜಯಪುರ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿರುವುದು ಅವರ ಜನರನ್ನು ಮತ್ತೆ ತಮ್ಮತ್ತ ಸೆಳೆಯುವ ಉದ್ದೇಶವಾಗಿದೆಯೇ ಹೊರತು ಮತ್ತೇನು ಹೊಸದಿಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಟ್ನಲ್ಲಿದ್ದಾಗ ಗೋವಾ ಸರ್ಕಾರದವರು ವಾದ ಮಾಡದೆ ಸುಮ್ಮನಿದ್ದು, ಸಮ್ಮತಿ ಸೂಚಿಸಿದ್ದರು. ಈಗ ಮತ್ತೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸುಪ್ರೀಂಕೋರ್ಟ್ ಈಗಾಗಲೇ ಐತೀರ್ಪು ಪ್ರಕಟಿಸಿದೆ. ಆ ಸಮಯದಲ್ಲೇ ಗೋವಾ ಸರ್ಕಾರ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಅಂದು ಮೌನ ವಹಿಸಿ ಇಂದು ಮತ್ತೆ ಕೋರ್ಟ್ಗೆ ಹೋಗಲು ಮುಂದಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ, ಇದು ರಾಜಕೀಯ ಪ್ರೇರಿತವಾಗಿದೆ ಎಂದರು.
ರಾಜ್ಯದ ನೆಲ, ಜಲ ವಿಚಾರದಲ್ಲಿ ರಾಜಕೀಯವಿಲ್ಲ:
ರಾಜ್ಯದ ನೆಲ, ಜಲ ವಿಚಾರವಾಗಿ ರಾಜಕೀಯ ಮಾಡಲ್ಲ, ಮಾಡುವುದು ಸರಿಯೂ ಅಲ್ಲ. ಈ ಹಿಂದೆ ಕಾವೇರಿ ವಿಚಾರವಾಗಿ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿ, ಬೆಂಬಿಲಿಸುತ್ತಾ ಬಂದಿದ್ದೇನೆ ಎಂದು ಎಂ ಬಿ ಪಾಟೀಲ್ ಹೇಳಿದರು.