ವಿಜಯಪುರ : ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದೆ. ಕೆಲವರು ಇದನ್ನು ನಿರ್ಲಕ್ಷಿಸಿ ಗುಂಪು ಗುಂಪಾಗಿ ಸೇರುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಪಾಯಕಾರಿ ಸಾಂಕ್ರಾಮಿಕ ಕೊರೊನಾ ನಿಯಂತ್ರಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಲಾಕ್‍ಡೌನ್ ಪಾಲಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿ ಪರಿಹಾರ ಕಂಡುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳು ಕೂಡ ನಿಗದಿತ ಪ್ರಮಾಣದ ಪಡಿತರವನ್ನು ಮಾರ್ಗಸೂಚಿಯನ್ವಯ ವಿತರಿಸಲು ಸೂಚಿಸಲಾಗಿದೆ. ಪಡಿತರ ವಿತರಣೆಯಲ್ಲಿ ಲೋಪವೆಸಗುವ ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ಸರ್ಕಾರದ ನಿರ್ದೇಶನದನ್ವಯ ರದ್ದುಗೊಳಿಸಲಾಗುತ್ತದೆ. ಬಡಜನತೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿರುವ ಅವರು ಈಗಾಗಲೇ ಲೋಪವೆಸಗುವ ನ್ಯಾಯಬೆಲೆ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೋವಿಡ್-19 ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಗಡಿಭಾಗಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಈ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಕಲಬುರ್ಗಿ, ಬಾಗಲಕೋಟ, ಧಾರವಾಡ, ಬೆಳಗಾವಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಮತ್ತು ಖಾಸಗಿ ಸಿಬ್ಬಂದಿ ಬೇರೆ ಜಿಲ್ಲೆಗಳಿಗೆ ದಿನನಿತ್ಯ ಹೋಗಿಬರುವಂತಹ ಓಡಾಟ ನಿರ್ಬಂಧಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಸಿಬ್ಬಂದಿ ಗಮನಿಸಬೇಕು.
ವೈದ್ಯಕೀಯ ಕಾರಣಗಳಿಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ತಮಗೆ ಬೇಕಾದ ಔಷಧಿಗಳು ಲಭ್ಯವಿಲ್ಲದ ಬಗ್ಗೆ ಮುಚ್ಚಳಿಕೆ ನೀಡಬೇಕು. ಒಂದು ವೇಳೆ ಬೇರೆ ಜಿಲ್ಲೆಗೆ ಹೋಗಿ ಬಂದ ಸಂದರ್ಭದಲ್ಲಿ ಆ ವ್ಯಕ್ತಿಯು ಸಹ 14 ದಿನಗಳ ಕಾಲ ಕಡ್ಡಾಯವಾಗಿ ಕುಟುಂಬ ಸಮೇತ ಹೋಂ ಕ್ವಾರಂಟೈನ್‍ಗೆ ಒಳಪಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಮಾತನಾಡಿ, ಜಿಲ್ಲೆಯಾದ್ಯಂತ 1700 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಿಂದ ಗಂಟಲು ದ್ರವ ಮಾದರಿಗಳನ್ನು ಹೆಚ್ಚಿನ ರೀತಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದಾರೆ.