ಮುದ್ದೇಬಿಹಾಳ(ವಿಜಯಪುರ): ಅಂಗನವಾಡಿ ಮಕ್ಕಳಿಗೆ ಕೊಡುವ ಉಚಿತ ಹಾಲಿನ ಪುಡಿಯ ಪ್ಯಾಕೇಟ್‌ಗಳನ್ನ ಕದ್ದೊಯ್ಯುವ ವೇಳೆ ಸಿಕ್ಕಿಬಿದ್ದಿದ್ದ ತಾಲೂಕಿನ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆ ಇಂದು ಪರಿಶೀಲನೆಗೆ ಆಗಮಿಸಿದ್ದ ಮೇಲ್ವಿಚಾರಕರಿಗೂ ಬೆಲೆ ಕೊಡದೆ ರಿಜಿಸ್ಟರ್‌ಗಳನ್ನ ತೆಗೆದುಕೊಂಡು ಮನೆಗೆ ಹೋದ ಘಟನೆ ನಡೆದಿದೆ. ಇದನ್ನ ಖಂಡಿಸಿ ಗ್ರಾಮಸ್ಥರು ಅಂಗನವಾಡಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಹಾಲಿನ ಪುಡಿ ಪ್ಯಾಕೇಟ್ ಕದ್ದೊಯ್ಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಕಾರ್ಯಕರ್ತೆಯನ್ನ ವಿಚಾರಿಸಲೆಂದು ಮೇಲ್ವಿಚಾರಕರಾದ ವಿಜಯಲಕ್ಷ್ಮೀ ಮೇಟಿ ಹಾಗೂ ಪಿ.ಕೆ.ಸಜ್ಜನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹಾಲಿನ ಪ್ಯಾಕೇಟ್ ಬಗ್ಗೆ ಮಾಹಿತಿ ನೀಡುವಂತೆ ಕಾರ್ಯಕರ್ತೆಗೆ ಕೇಳಿದ್ದಾರೆ. ಆದರೆ ಕಾರ್ಯಕರ್ತೆ, ಅವರಿಗೆ ಪ್ರತಿಕ್ರಿಯಿಸದೆ ಅಂಗನವಾಡಿಯಲ್ಲಿದ್ದ ರಿಜಿಸ್ಟರ್‌ಗಳನ್ನ ತೆಗೆದುಕೊಂಡು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ವಿಚಾರಣೆ ನಡೆಸಲು ಬಂದರೂ ಸಹಕರಿಸದೆ ಮನೆಗೆ ಹೋದ ಕಾರ್ಯಕರ್ತೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಕಾರ್ಯಕರ್ತೆಯನ್ನ ಮೇಲಾಧಿಕಾರಿಗಳು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆಹಾರ ಧಾನ್ಯಗಳಲ್ಲಿ ಹುಳು ಪತ್ತೆ: ಮೇಲ್ವಿಚಾರಕಯರು ಆಹಾರ ಧಾನ್ಯಗಳ ದಾಸ್ತಾನು ಪರಿಶೀಲನೆಗೆ ಮುಂದಾದಾಗ, ಅಂಗನವಾಡಿಯಲ್ಲಿ ಅವ್ಯವಸ್ಥೆಯ ಆಗರವೇ ಕಂಡು ಬಂದಿದೆ. ಜನವರಿ 2019ರಲ್ಲಿ ಸರ್ಕಾರ ಪೂರೈಸಿದ್ದ ಅಕ್ಕಿ ಹಾಗೂ ಬೇಳೆ ಪ್ಯಾಕೇಟ್ ದೊರೆತಿದ್ದು, ಇವುಗಳಲ್ಲಿ ಹುಳಗಾಳಾಗಿರುವುದು ಕಂಡು ಬಂದಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಡಿಪಿಒ, ಸದರಿ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಜರುಗಿಸಲಾಗುವುದು. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.