ಮುದ್ದೇಬಿಹಾಳ : ಕೊರೊನಾ ವೈರಸ್ ಹಾವಳಿ ನಿಯಂತ್ರಿಸಲು ಪ್ರಮುಖ ವಾಣಿಜ್ಯ ಪಟ್ಟಣವಾಗಿರುವ ತಾಳಿಕೋಟೆಯಲ್ಲಿ ಅಗಸ್ಟ್ 4 ರಿಂದ 9ರವರೆಗೆ ಸ್ವಯಂ ಪ್ರೇರಿತವಾಗಿ ಸಂಪೂರ್ಣ ಲಾಕ್‌ಡೌನ್ ಮಾಡಲು ಪುರಸಭೆ ಸದಸ್ಯರು, ಪ್ರಮುಖ ವ್ಯಾಪಾರಸ್ಥರು ನಿರ್ಣಯ ಕೈಗೊಂಡಿದ್ದಾರೆ.
ತಾಳಿಕೋಟೆ ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾ ಭವನದಲ್ಲಿಂದು ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ನಿತ್ಯ 10ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ರೋಗ ವ್ಯಾಪಿಸುತ್ತಿದೆ.
ಹಾಗಾಗಿ ಸೋಂಕನ್ನು ಹತೋಟಿಗೆ ತರುವ ದೃಷ್ಟಿಯಿಂದ ಎಲ್ಲಾ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ವ್ಯಾಪಾರ-ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಸಹಕರಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದವು.
ಪುರಸಭೆ ಸದಸ್ಯ ಮುತ್ತಣ್ಣ ಚಮಲಾಪೂರ ಮಾತನಾಡಿ, ಪಟ್ಟಣದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿವೆ. ಇದು ವೃದ್ಧರಿಗೆ ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚು ಮಾರಕವಾದ ರೋಗವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಸೋಂಕಿನ ಹತೋಟಿ ಕುರಿತು ಸಾಕಷ್ಟು ಜಾಗೃತಿ ಮೂಡಿಸುವಂತಹ ಕಾರ್ಯಗಳಾಗಿದ್ರೂ ಕೂಡಾ ಜನತೆ ಸರಿಯಾಗಿ ಸ್ಪಂದಿಸುತ್ತಿಲ್ಲ.
ಮಾಸ್ಕ್ ಎಂಬುದು ರೋಗವನ್ನು ಹತೋಟಿಗೆ ತರುವ ಅಸ್ತ್ರವಾಗಿದ್ದು ಇದನ್ನು ಪ್ರತಿಯೊಬ್ಬರು ಧರಿಸಬೇಕು. ಜೊತೆಗೆ ಎಲ್ಲಾ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ 6 ದಿನಗಳ ಕಾಲ ತಮ್ಮ ವ್ಯಾಪಾರ, ವಹಿವಾಟನ್ನು ಬಂದ್ ಮಾಡಿ ಸಹಕರಿಸಬೇಕು ಎಂದು ಹೇಳಿದರು. ಸಭೆಯಲ್ಲಿ ವಿವಿಧ ವ್ಯಾಪಾರಿ ಅಸೋಸಿಯೇಷನ್‌ನವರು, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.