ವಿಜಯಪುರ: ಕೊರೊನಾದಿಂದ ಮೃತಪಟ್ಟವನ ದೇಹವನ್ನು ಹೂಳಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಘಟನೆ ನಗರದ ಚಾಲುಕ್ಯ ನಗರದಲ್ಲಿ ನಡೆದಿದೆ.
ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾದಿಂದ ಮೃತಪಟ್ಟವರನ್ನ ಇಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಶಾನದ ಗೇಟಿಗೆ ಮುಳ್ಳು ಬೇಲಿ ಹಾಕಿ ಸೀಲ್ ಡೌನ್ ಮಾಡಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಹಾವಳಿ ಮುಗಿಯುವವರೆಗೂ ಯಾರಿಗೂ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.