ವಿಜಯಪುರ : ಮಾಜಿ ಸಚಿವ ಎಂ. ಬಿ ಪಾಟೀಲ ಲಿಂಗಾಯತ ಸಮುದಾಯದವರಲ್ಲ ಎನ್ನುವ ಹೇಳಿಕೆ ನೀಡಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ ಕೊಳಕೂರ ಅವರ ವಿರುದ್ಧ ಆಕ್ರೋಶ ಹೊರ ಹಾಕಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಹಾಗೂ ಉಪಪಂಗಡಗಳ ಮುಖಂಡರು, ಉಮೇಶ್ ಕೊಳಕೂರ ಅವರು ಲಿಂಗಾಯತರ ಅಸ್ತಿತ್ವವನ್ನು ಕೆಣಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವ ಎಂ. ಬಿ ಪಾಟೀಲ ಅವರ ನಡುವಿನ ಮುಸುಕಿನ ಗುದ್ದಾಟ ಮತ್ತೆ ತಾರಕಕ್ಕೇರಿದೆ. ನಿನ್ನೆಯಷ್ಟೇ ಕಾರಜೋಳ ಬೆಂಬಲಿಗರು ಎಂ.ಬಿ ಪಾಟೀಲ ಅವರು ಲಿಂಗಾಯತ ಸಮುದಾಯದವರಲ್ಲ, ಅವರ ವಂಶಸ್ಥರು ಕೂಡು ಒಕ್ಕಲಿಗರ ಸಮುದಾಯಕ್ಕೆ ಸೇರಿಸಿ ಎಂದು ಮನವಿ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಕೌಂಟರ್ ನೀಡಿರುವ ಎಂ. ಬಿ ಪಾಟೀಲ ಬೆಂಬಲಿಗರು, ಮಾಜಿ ಜಲಸಂಪನ್ಮೂಲ ಸಚಿವರ ಪರ ನಿಂತಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಸಂಗಮೇಶ ಬಬಲೇಶ್ವರ ಅವರು, ಸಚಿವ ಗೋವಿಂದ ಕಾರಜೋಳ ಸಹ ಲಿಂಗಾಯತ ಸಮುದಾಯದವರು ಎಂದು ಅವರ ಬೆಂಬಲಿಗರು ನೀಡಿದ ಹೇಳಿಕೆಯನ್ನು ಅವರು ಸ್ವಾಗತಿಸಿದರು.
2009 ಮುನ್ನ ಲಿಂಗಾಯತ ಪಂಚಮಸಾಲಿ ಜಾತಿ ಪಟ್ಟಿಯಲ್ಲಿಯೇ ಇರಲಿಲ್ಲ. ಹಾಗಾದರೆ, ಎಂ ಸಿ ಮನಗೂಳಿ, ಶಿವಾನಂದ ಪಾಟೀಲ, ಸಿಎಂ ಬಸವರಾಜ ಬೊಮ್ಮಾಯಿ, ಸಿ. ಸಿ ಪಾಟೀಲ ಲಿಂಗಾಯತರು ಅಲ್ಲವೇ? ಎಂದು ಸಚಿವ ಕಾರಜೋಳ ಅವರನ್ನು ಪ್ರಶ್ನಿಸಿದ ಅವರು, ಈ ರೀತಿ ಬಾಲಿಷ ಹೇಳಿಕೆ ನೀಡುವ ಮೂಲಕ ಲಿಂಗಾಯತರ ಆತ್ಮಗೌರವನ್ನು ಕೆಣಕಿದ್ದೀರಿ. ಇದರಿಂದ ಸಮಾಜದಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾದರೆ, ಅದಕ್ಕೆ ನೇರವಾಗಿ ಸಚಿವ ಗೋವಿಂದ ಕಾರಜೋಳ ಕಾರಣ ಎಂದು ಎಚ್ಚರಿಸಿದರು.
ಮೀಸಲಾತಿ ಬಿಟ್ಟು ಸ್ಪರ್ಧಿಸಿ : ಸಚಿವ ಗೋವಿಂದ ಕಾರಜೋಳ ತಾವು ಸಹ ಲಿಂಗಾಯತ ಎನ್ನುವುದಾದರೆ ಮೀಸಲಾತಿ ಕ್ಷೇತ್ರ ಬಿಟ್ಟು ರಾಜ್ಯದ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಓದಿ: 'ಭದ್ರತೆ ಸಲುವಾಗಿ ಗಣ್ಯರ ಮನೆಗೆ ನಿಯೋಜನೆಗೊಳ್ಳುವ ಪೊಲೀಸರು ಪ್ರಾಮಾಣಿಕರಾಗಿರಬೇಕು'