ವಿಜಯಪುರ : ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಬೈರಗೊಂಡನ ಸಹಚರರಿಂದ ನನಗೆ ಜೀವ ಬೆದರಿಕೆಯಿದೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಲವು ದಿನಗಳಿಂದ ಭೀಮಾ ತೀರದ ಮಹಾದೇವ ಸಾಹುಕಾರನ ಹೆಸರು ಹೇಳಿಕೊಂಡು, ಹಂಚಿನಾಳ ತಾಂಡದ ಬಳಿ ನಮ್ಮ ತಾಂಡದ ಜನರನ್ನು ಕರೆದು ನನ್ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಷ್ಟು ದಿನ ಗನ್ ಮ್ಯಾನ್ ತಗೊಂಡು ಓಡಾಡ್ತೀರ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಮೊನ್ನೆಯಷ್ಟೆ ದೀಪಾವಳಿ ಅಮಾವಾಸ್ಯೆ ರಾತ್ರಿ ಶ್ರೀಗಂಧ ಮರ ಕಳ್ಳತನ ಮಾಡಲು ಮುಂದಾಗಿದ್ದರು, ಅದನ್ನು ತಡೆಯಲು ನಾನು ಹೋದಾಗ, ಎರಡ್ಮೂರು ಯುವಕರು ಗುಂಡು ಹೊಡೆಯುತ್ತೇವೆ ಎಂದು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದಾಗ ಕಳ್ಳತನಕ್ಕೆ ಬಂದವರು ಸ್ಥಳದಿಂದ ಕಾಲ್ಕಿತ್ತಿದ್ದರು. ಹಲವು ವರ್ಷಗಳಿಂದ ಮರಳು ಮಾಫಿಯಾ, ಡ್ರಗ್, ಮಾವಾ ಮಾರಾಟ ನಡೆಯುತ್ತಿದೆ. ಅವುಗಳನ್ನು ತಡೆಯಲು ಮುಂದಾದಾಗ ಜೀವ ಬೆದರಿಕೆ ಹಾಕಿದ್ದಾರೆ. ಚುನಾವಣಾ ಸಮಯದಲ್ಲೂ ನನಗೆ ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ನನಗೆ ಆಕ್ರಮ ಚಟುವಟಿಕೆ ಮಾಡುವವರ ಮೇಲೆ ಸಂಶಯ ಇದೆ. ಮನೆಯಿಂದ ಹೊರ ಹೋದರೆ ಮರಳಿ ಬರ್ತೀನೋ, ಇಲ್ಲವೋ ಎಂಬ ಭಯ ಶುರುವಾಗಿದೆ. ಅಪರಾಧ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ಅಧಿವೇಶದಲ್ಲಿ ಚರ್ಚೆ ಮಾಡುವುದಾಗಿ ಹೇಳಿದರು.