ವಿಜಯಪುರ: ವಿಧಾನಸಭಾ ಚುನಾವಣೆ ಬರುವ ಮುನ್ನವೇ ಜಿಲ್ಲಾ ರಾಜಕಾರಣದಲ್ಲಿ ಹೇಳಿಕೆ, ಪ್ರತಿಕ್ರಿಯೆಗಳು ಶುರುವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಬಿಜೆಪಿಗೆ ಬರುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಶಿವಾನಂದ ಪಾಟೀಲ, "ನಾನು ಯಾವುದೇ ಕ್ಷೇತ್ರ, ಪಕ್ಷಕ್ಕೆ ಸೀಮಿತವಾಗಿಲ್ಲ. ಶಾಸಕ ಯತ್ನಾಳ್ ಬಯಸುವುದಾದರೆ ವಿಜಯಪುರ ನಗರ ಕ್ಷೇತ್ರದಿಂದ ಇಬ್ಬರೂ ಪಕ್ಷೇತರರಾಗಿ ಸ್ಪರ್ಧೆ ಮಾಡೋಣ. ನಾನು ಗೆದ್ದರೆ ಅವರು ರಾಜಕೀಯದಿಂದ ದೂರ ಉಳಿಯಲಿ, ನಾನು ಸೋತರೆ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ" ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಅವರನ್ನು ಕೇಳಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ಪಕ್ಷಕ್ಕಾದರೂ ಹೋಗಲು, ಬರಲು ಸ್ವತಂತ್ರನಾಗಿದ್ದೇನೆ. ಒಂದು ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡುವ ವ್ಯಕ್ತಿಯಲ್ಲ" ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಮೋದಿ ಬಂದ ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ? : ಜಮೀರ್ ಕಿಡಿ
ಶಾಸಕ ಪಾಟೀಲ ಸವಾಲಿಗೆ ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ್, "ಅವರಿಗೆ ಬ್ಲ್ಯಾಕ್ ಮೇಲ್ ಮಾಡುವ ಚಟವಿದೆ. ಶಾಸಕ ಎಂ.ಬಿ.ಪಾಟೀಲ್ಗೆ ಬ್ಲ್ಯಾಕ್ ಮೇಲ್ ಮಾಡಿದ ಹಾಗೆ ನನಗೆ ಮಾಡಲು ಆಗುವುದಿಲ್ಲ" ಎಂದರು.