ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಸುಳ್ಳನ್ನು 10 ಬಾರಿ ಹೇಳಿ ಅದನ್ನು ಸತ್ಯ ಮಾಡುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಾಹಪೂರ ತಿಳಿಸಿದರು.
ನಗರದ ಬಿಎಲ್ಡಿಇ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಿರುವ ಆರ್ಟಿಪಿಸಿಆರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಆತಂಕದ ನಡುವೆ ವೈದ್ಯಕೀಯ ಉಪಕರಣ, ಪಿಪಿಇ ಕಿಟ್ ಖರೀದಿಯಲ್ಲಿ ಸರ್ಕಾರ ಹಗರಣ ನಡೆಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಹಿಂಬಾಲಕ ನಾಯಕರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ ಎಂದರು.
ಸದ್ಯ ವಿರೋಧ ಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಿ ಕೊರೊನಾದಂತಹ ಮಹಾಮಾರಿ ಹೋಗಲಾಡಿಸಲು ಪ್ರಯತ್ನಿಸಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅದು ಬಿಟ್ಟು ಈ ರೀತಿ ಹಗರಣ ನಡೆದಿದೆ ಎಂದು ಆರೋಪಿಸಿ ಕೊರೊನಾ ತಡೆಯಲು ನಡೆಸುತ್ತಿರುವ ಹೋರಾಟದ ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿದೆ ಎಂದರು.
ವಿರೋಧ ಪಕ್ಷದವರು ಪ್ರಶ್ನಿಸುವ ಹಕ್ಕು ಇದೆ. ಅದು ಸದನದಲ್ಲಿ ಕೇಳಲಿ, ಅದಕ್ಕೆ ಮುಖ್ಯಮಂತ್ರಿಯಾದಿಯಾಗಿ ಸಂಬಂಧಿಸಿದ ಸಚಿವರು ಉತ್ತರಿಸುತ್ತಾರೆ. ಅದು ಬಿಟ್ಟು ಹಾದಿ ಬೀದಿಯಲ್ಲಿ ಮಾತಿನ ಹೋರಾಟ ಮಾಡುವುದು ಸರಿಯಲ್ಲ ಅವರಿಗೆ ಕೈ ಮುಗಿದು ಕೇಳುತ್ತೇನೆ. ಈ ವಿಷಯ ಇಲ್ಲಿಯೇ ಬಿಟ್ಟು ಕೊರೊನಾ ಹೋರಾಟಕ್ಕೆ ಸರ್ಕಾರದ ಜತೆ ವಿರೋಧ ಪಕ್ಷಗಳು ಕೈ ಜೋಡಿಸಲಿ ಎಂದು ಮನವಿ ಮಾಡಿದರು.