ವಿಜಯಪುರ : ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ ಸಿ ಪಾಟೀಲ ನೀಡಿರುವ ಹೇಳಿಕೆಗೆ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲದಿದ್ದರೇ ಖಾತೆ ಬದಲಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಅಧಿಕಾರ ದಾಹಕ್ಕಾಗಿ ಪಕ್ಷ ಬಿಟ್ಟು ಪಕ್ಷಕ್ಕೆ ಹಾರಿದ್ದೀರಿ. ಮಂತ್ರಿಯಾಗಿ ಕೃಷಿ ಖಾತೆಯನ್ನೇ ಪಡೆದುಕೊಂಡಿದ್ದೀರಿ. ಆದರೆ, ಈಗ ರೈತರನ್ನೇ ಹೇಡಿಗಳು ಅನ್ನಲು ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಗ್ಗೆ ಮಾತನಾಡುವ ಅಧಿಕಾರ ಇವರಿಗೆ ಕೊಟ್ಟವರು ಯಾರು?. ಕೆಲಸ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ ಅಥವಾ ಬೇರೆ ಖಾತೆಗೆ ವರ್ಗಾಯಿಸಿಕೊಳ್ಳಲಿ, ಅದು ಬಿಟ್ಟು ರೈತರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ಬಿಡಲಿ ಎಂದು ಗುಡುಗಿದರು.
ಯತ್ನಾಳ ನಾಲಾಯಕ್ : ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೊಡ್ಡ ನಾಯಕನೆಂದು ತಿಳಿದಿದ್ದೆ. ಆದರೆ, ನಿನ್ನೆ ವಿಜಯಪುರ ನಗರದ ರಸ್ತೆಗಳ ದುಸ್ಥಿತಿ ನೋಡಿ ನನಗೆ ಗಾಬರಿಯಾಗಿದೆ. ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡುವುದು ಬಿಟ್ಟು ಅವರು ಕನ್ನಡ ಪರ ಹೋರಾಟಗಾರರ ವಿರುದ್ಧ ಮಾತನಾಡುತ್ತಿದ್ದಾರೆ. ಇವರಂತ ನಾಲಾಯಕ್ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಯತ್ನಾಳ ವಿರುದ್ಧ ಕೃಷ್ಣಮೂರ್ತಿ ಕಿಡಿಕಾರಿದರು.
ಮಂತ್ರಿ ಸ್ಥಾನಕ್ಕಾಗಿ ಕನ್ನಡ ಪರ ಹೋರಾಟಗಾರರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮೊದಲು ಶಾಸಕ ಸ್ಥಾನದ ಜವಾಬ್ದಾರಿ ಸರಿಯಾಗಿ ನಿಭಾಯಿಸಲಿ ನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದರು.
ರೈತರ ಹೋರಾಟಕ್ಕೆ ಬೆಂಬಲ : ಕೇಂದ್ರ ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿ ದೇಶಕ್ಕೆ ಮಾರಕವಾಗುತ್ತದೆ. ಇದೇ ಕಾರಣಕ್ಕೆ ರೈತರು ಹೋರಾಟ ನಡೆಸುತ್ತಿದ್ದಾರೆ. ತಕ್ಷಣ ಕೇಂದ್ರ ಕೃಷಿ ನೀತಿ ಹಿಂಪಡೆಯಬೇಕು. ಕೃಷಿ ನೀತಿ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಎಸ್ಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.