ವಿಜಯಪುರ: ಎಲ್‌ಬಿಎಸ್ ಮಾರುಕಟ್ಟೆಯ ಕಸ ವಿಲೇವಾರಿ ಮಾಡದಿರೋದಕ್ಕೆ ಅಂಗಡಿ ಮಾಲೀಕರು ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಗರದ ಹೃದಯ ಭಾಗಗಳಲ್ಲಿರುವ ಲಾಲ್ ಬಹದ್ದೂರ್ ವ್ಯಾಪಾರ ಕೇಂದ್ರದಲ್ಲಿ ಕಳೆದ ಹಲವು ದಿನಗಳಿಂದ ಮಹಾನಗರ ಪಾಲಿಕೆ ಸಿಬ್ಬಂದಿ ಕಸ ತೆರವು ಮಾಡದಿರುವುದರಿಂದ ರೋಗ ಹರಡುವ ಭೀತಿ ಎದುರಾಗಿದೆ. 5 ದಿನಗಳಿಗೊಮ್ಮೆ ಕಸ ವಿಲೇವಾರಿ ಮಾಡಲಾಗುತ್ತಿದೆ. ಅಂಗಡಿ ಮಾಲೀಕರಿಗೆ ವಹಿವಾಟು ನಡೆಸುವುದು ಕಷ್ಟವಾಗಿದೆ. ನಗರದಲ್ಲಿ ಅತಿಯಾದ ಮಳೆಯಿಂದಾಗಿ ಸಂಗ್ರಹಿಸಿಟ್ಟಿದ್ದ ಕಸ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ.
ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ಸುಮಾರು 475 ಮಳಿಗೆಗಳಿದ್ದು, ಪ್ರತೀ ಅಂಗಡಿಯಿಂದ ಸಂಗ್ರಹವಾಗುವ ಕಸ ಗೋಣಿ ಚೀಲಗಳಲ್ಲಿ ತುಂಬಿ ಒಂದು ಕಡೆ ಹಾಕಲಾಗುತ್ತಿದೆ. ಪ್ರತಿದಿನವೂ ಕಸ ತೆರವುಗೊಳಿಸಬೇಕಾದ ಮಹಾನಗರ ಪಾಲಿಕೆ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ವ್ಯಾಪಾರಿಗಳು ಆರೋಪ ಮಾಡುತ್ತಿದ್ದಾರೆ.
ಅಲ್ಲದೆ ಪ್ರತೀ ವರ್ಷವೂ ಕಸ ವಿಲೇವಾರಿಗಾಗಿ ತಲಾ ಒಂದು ಮಳಿಗೆಯಿಂದ 1200 ರೂ. ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಸರಿಯಾಗಿ ಕಸ ವಿಲೇವಾರಿ ಮಾಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.