ವಿಜಯಪುರ: ಲಾಕ್‌ಡೌನ್ ಭೀತಿಯಿಂದ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣ ಮಳಿಗೆಗಳ ಕರೆಂಟ್ ಬಿಲ್ ಮನ್ನಾ ಮಾಡಬೇಕು. ಜೊತೆಗೆ ಮಾರುಕಟ್ಟೆ ಕಟ್ಟಡ ದುರಸ್ತಿ ಮಾಡಬೇಕು ಎಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸದಂತೆ ಕೊಕ್ಕೆ ಹಾಕಿದೆ. 400ಕ್ಕೂ ಅಧಿಕ ಮಳಿಗೆಗಳಿರುವ ಮಾರುಕಟ್ಟೆಯಿಂದ ಮಹಾನಗರ ಮಾಲಿಕೆಗೆ ಪ್ರತಿ ವರ್ಷ 1 ಕೋಟಿ ಆದಾಯ ಬರುತ್ತದೆ. ಎರಡು ತಿಂಗಳುಗಳ ಕಾಲ ಮಾರುಕಟ್ಟೆ ಬಂದ್ ಆಗಿದ್ದ ಹಿನ್ನೆಲೆ ವ್ಯಾಪಾರ ಕಡಿಮೆಯಾಗಿದ್ದು, ಎರಡು ತಿಂಗಳ ಕರೆಂಟ್ ಬಿಲ್ ಭರಿಸಲು ಮಾಲೀಕರಿಗೆ ಸಾಧ್ಯವಾಗುವುದಿಲ್ಲ ಹೀಗಾಗಿ ಜಿಲ್ಲಾಡಳಿತ ಕರೆಂಟ್ ಬಿಲ್ ಮನ್ನಾ ಮಾಡಬೇಕು ಎಂದು ಕೋರಲಾಗಿದೆ.
ಮಳಿಗೆಗಳನ್ನು ನಂಬಿಕೊಂಡು ಬದಕು ಕಟ್ಟಿಕೊಂಡ ಕೂಲಿಕಾರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು. ಜೊತೆಗೆ, ವ್ಯಾಪಾರವಿಲ್ಲದೇ ಸಂಕಷ್ಟದಲ್ಲಿರುವ ವ್ಯಾಪಾರಿಗಳ ಎರಡು ತಿಂಗಳ ಮಳಿಗೆ ಬಾಡಿಗೆ ಮನ್ನಾ ಮಾಡಿ ಅವರಲ್ಲಿ ಅಗತ್ಯವಿದ್ದವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.