ಶಾಸಕ ಬಿ ಆರ್ ಪಾಟೀಲ್ ಅಸಮಾಧಾನದ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಚಿವ ಬೈರೇಗೌಡ - ಈಟಿವಿ ಭಾರತ ಕನ್ನಡ
ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.


Published : Nov 29, 2023, 5:19 PM IST
ವಿಜಯಪುರ: ತಮ್ಮ ವಿರುದ್ಧ ಕೇಳಿಬಂದ ಆರೋಪಗಳ ಕುರಿತಾಗಿ ತನಿಖೆಯಾಗಲಿ, ಬಳಿಕ ಸದನದಲ್ಲಿ ಭಾಗಿಯಾಗುತ್ತೇನೆ ಎನ್ನುವ ಮೂಲಕ ಆಳಂದ ಶಾಸಕ ಬಿ ಆರ್ ಪಾಟೀಲ್, ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತಿಯಲ್ಲಿ ಮಾತನಾಡಿದ ಅವರು, ನಾನು ಸದನದಲ್ಲಿ ಏನು ಉತ್ತರ ಕೊಟ್ಟಿದೀನಿ ಎನ್ನುವುದರ ಪ್ರತಿ ಕೊಡ್ತೀನಿ. ಪ್ರತಿಯಲ್ಲಿ ವಿವರ ಇದೆ. ಅದರಲ್ಲಿ ಏನು ಹೇಳಿದ್ದೇನೆ ಅನ್ನೋದು ನೀವು ತೀರ್ಮಾನ ಮಾಡಬಹುದು. ಬಿ ಆರ್ ಪಾಟೀಲ್ ಹಾಗೆ ಯಾಕೆ ಮಾತನಾಡಿದ್ರು ಅಂತಾ ನಾನು ಪ್ರತಿಕ್ರಿಯೆ ನೀಡಲು ಹೋಗಲ್ಲ. ರಾಜ್ಯದಲ್ಲಿ ಬರಗಾಲವಿದೆ, ಕಂದಾಯ ಇಲಾಖೆ ಸಮಸ್ಯೆಗಳಿವೆ. ಜಿಲ್ಲೆಗಳಿಗೆ ಹೋಗಿ ಚರ್ಚೆ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿದ್ದರೆ ಚರ್ಚೆ ಮಾಡ್ತೀನಿ ಎನ್ನುವ ಮೂಲಕ ಆಳಂದ ಶಾಸಕ ಬಿ ಆರ್ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಸುಮ್ಮನೆ ಕಾಂಟ್ರವರ್ಸಿ ಮಾಡೋಕೆ ನಾನು ಬಂದಿಲ್ಲ. ಈ ವಿಚಾರದಲ್ಲಿ ಸಿಎಂ ತೀರ್ಮಾನ ತೆಗೆದುಕೊಳ್ತಾರೆ. ಅವರಿಗೆ ಸಾಮಾರ್ಥ್ಯವಿದೆ, ಅನುಭವವಿದೆ. ಮಾಧ್ಯಮದವರಿಗೆ ಮಾಹಿತಿ ಬೇಕಿದ್ದರೆ, ಸದನದಲ್ಲಿ ಏನು ನಡೆದಿದೆ ಅನ್ನೋ ಪ್ರತಿ ಕೊಡ್ತೇನೆ. ನಾನು ಈ ಬಗ್ಗೆ ಉತ್ತರ ಕೊಟ್ಟಿದ್ದೇನೆ, ಈ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ. ಬಿ.ಆರ್ ಪಾಟೀಲ್ ಅವರು ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸಿಎಂ ಅವರೇ ತೀರ್ಮಾನ ತೆಗೆದುಕೊಳ್ತಾರೆ ಎಂದರು.
ತನಿಖೆ ಬಳಿಕ ಸದನಕ್ಕೆ ಹಾಜರಾಗ್ತೀನಿ ಎಂಬ ಹೇಳಿಕೆ ವಿಚಾರಕ್ಕೆ ಅವರು ಪತ್ರವನ್ನು ಸಿಎಂಗೆ ಬರೆದಿದ್ದಾರೆ. ಈ ಬಗ್ಗೆ ತನಿಖೆ ಮಾಡೋದು ಅವರಿಗೆ ಬಿಟ್ಟದ್ದು. ತನಿಖೆ ಬಗ್ಗೆ ಪ್ರತಿಕ್ರಿಯೆ ನೀಡೋದು ಪ್ರಸ್ತುತವಲ್ಲ. ಸಿಎಂ ಏನು ತೀರ್ಮಾನ ಮಾಡ್ತಾರೆ ಅದನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ’’ಬಿ ಆರ್ ಪಾಟೀಲ್ ಜೊತೆಗೆ ಸಿಎಂ ಕರೆದಿರುವ ಸಭೆಯಲ್ಲಿ ಕೃಷ್ಣ ಬೈರೇಗೌಡರಿಗೂ ಆಹ್ವಾನ ನೀಡಲಾಗಿದೆ ಎಂಬ ವಿಚಾರಕ್ಕೆ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಶಾಸಕಾಂಗ ಸಭೆಯಲ್ಲಿ ಯಶವಂತರಾಯಗೌಡ ಪಾಟೀಲ ನನ್ನ ಬೆಂಬಲಕ್ಕೆ ನಿಂತರು ಎಂಬ ಆಳಂದ ಶಾಸಕ ಬಿ ಆರ್ ಪಾಟೀಲ್ ಹೇಳಿಕೆಗೆ ಶಾಸಕ ಯಶವಂತರಾಯಗೌಡ ಪ್ರತಿಕ್ರಿಯೆ ನೀಡದ್ದಾರೆ. ಅವರು ಯಾವ ವಿಚಾರವಾಗಿ ಈ ರೀತಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಜೊತೆಗೆ ಮಾತನಾಡಿ, ಇದಕ್ಕೆ ಪ್ರತಿಕ್ರಿಯಿಸುವೆ. ನಾನೊಬ್ಬನೇ ಅಲ್ಲ, ಬಹಳ ಜನ ಶಾಸಕರು ಸಪೋರ್ಟ್ ಮಾಡಿದ್ದಾರೆ. ಸಪೋರ್ಟ್ ಮಾಡಿದರೆ ವಿರೋಧ ಮಾಡಿದ ಹಾಗಲ್ಲ. ಕೆಲವು ವಿಚಾರಗಳ ಮೇಲೆ ಚರ್ಚೆ ಆಗುತ್ತಿರುತ್ತದೆ. ಅದರ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು ಮನಸ್ಸಿಲ್ಲ ಎಂದರು. ಬಿ ಆರ್ ಪಾಟೀಲ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಅವರನ್ನೇ ಕೇಳಿ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ, ನಾಯಕತ್ವದ ಮೇಲೆ ವಿಶ್ವಾಸವಿದೆ ಎಂದರು.
ಬಗರ್ ಹುಕುಂ ಸಾಗುವಳಿ ಕುರಿತು ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ: ಬಗರ್ ಹುಕುಂ ಸಾಗುವಳಿ ಕುರಿತಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಬಗರ್ ಹುಕಂ ಸಮೀತಿ ಸ್ಥಾಪನೆ ಮಾಡಲು ನಮಗೆ ಸುಮಾರು 50 ಕ್ಷೇತ್ರಗಳಿಂದ ಪ್ರಸ್ಥಾವನೆ ಬಂದಿತ್ತು. ನಮಗೆ ಯಾವುದ್ಯಾವುದು ಪ್ರಸ್ಥಾವನೆ ಬಂದಿತ್ತು ಅವುಗಳೆಲ್ಲವನ್ನೂ ಸಹ ನಿನ್ನೆ ನಾವು ಆದೇಶ ಮಾಡಿ 50 ಕ್ಷೇತ್ರಗಳಲ್ಲಿ ಸಮಿತಿಗಳನ್ನ ರಚನೆ ಮಾಡಿದ್ದೇವೆ. ಉಳಿದೆಡೆಯಲ್ಲೆಲ್ಲ ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ತತ್‌ಕ್ಷಣ ಬಗರ್‌ಹುಕುಂ ಸಮಿತಿಗಳ ಪ್ರಸ್ಥಾವನೆ ಕಳಿಸಬೇಕು ಅಂತ.
ಈ ವರೆಗೂ ಸುಮಾರು 180 -190 ಕ್ಷೇತ್ರಗಳಲ್ಲಿ ಅರ್ಜಿಗಳು ಬಂದಿವೆ. ಎಲ್ಲೆಲ್ಲಿ ಬಂದಿವೆ ಅಷ್ಟೂ ಕ್ಷೇತ್ರಗಳಿಗೆ ಸಮಿತಿಗಳನ್ನ ರಚನೆ ಮಾಡಬೇಕು ಅನ್ನೋದು ಸರಕಾರದ ಉದ್ದೇಶ. ಜಿಲ್ಲಾಧಿಕಾರಿಗಳಿಗೆ ತತ್‌ಕ್ಷಣ ಪ್ರಸ್ಥಾವನೆ ಕಳಿಸಬೇಕು ಅಂತ ಹೇಳಿದ್ದೇನೆ. ಬಂದಿರುವಂತಹ 50 ಕ್ಷೇತ್ರಗಳಲ್ಲಿ ನಾವು ಆಗಲೇ ಸಮಿತಿಗಳನ್ನ ರಚನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ನಿಗಮ ಮಂಡಳಿಗೆ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ