ವಿಜಯಪುರ: ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಿ ಭವಿಷ್ಯದಲ್ಲಿ ಹಸಿರು ಸೈನಿಕರಾಗಬೇಕು ಎಂದು ಕೇರ್ ಆಫ್ ಫುಟ್ಪಾತ್ ಸಿನೆಮಾ ನಿರ್ದೇಶಕ ಹಾಗು ನಟ ಮಾಸ್ಟರ್ ಕಿಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಪಾಟೀಲ ಜೊತೆ ನಡೆದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಕುರಿತು ವಿನೂತನ ಮತ್ತು ವಿಶಿಷ್ಠ ಸಂವಾದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಎಸ್.ಪಿ.ಪಿ.ಎ (ಸೊಸೈಟಿ ಆಫ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್), ಶಾಲಾ ಶಿಕ್ಷಣ ಇಲಾಖೆ ಮತ್ತು ಅರ್ಜುಣಗಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯಲ್ಲಿ ಈ ಕಾರ್ಯಕ್ರಮ ಜರುಗಿತು. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ, ಕಾಡು, ಪ್ರಾಣಿಗಳ ಸಂರಕ್ಷಣೆಯಲ್ಲಿ ಎಸ್.ಪಿ.ಪಿ.ಎ ಸಂಘಟನೆ ಇತರರಿಗೆ ಮಾದರಿಯಾಗಿದೆ. ಈ ಸಂಸ್ಥೆಯ ಧ್ಯೇಯೋದ್ದೇಶಗಳು ಸುಂದರ ಪರಿಸರ ನಿರ್ಮಿಸಿ ಪ್ರಾಣಿ, ಪಕ್ಷಿ ಸಂಕುಲಗಳನ್ನು ಸಂರಕ್ಷಿಸಿ ಮನುಕುಲದ ಒಳತಿಗಾಗಿ ಪೂರಕವಾಗಿವೆ ಎಂದರು.
ಈ ಸಂಘಟನೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮರಗಳನ್ನು ಸಂರಕ್ಷಿಸುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಜಲ, ವಾಯು, ಭೂ ಮಾಲಿನ್ಯ ಇಂದು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಪರಿಸರ ನಾಶದಿಂದ ಜನಜೀವನಕ್ಕೂ ತೊಂದರೆಯಾಗುತ್ತಿದೆ. ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿ ಗೆಲುವು ನಿನ್ನ ಕೈಯಲ್ಲಿದೆ ಎಂದು ಹಾಡು ಹಾಡಿದರು. ಅಲ್ಲದೇ, ಪ್ರತಿಯೊಬ್ಬರು ಕನಿಷ್ಠ ತಲಾ ಒಂದು ಮರ ನೆಡುವಂತೆ ಮಾಸ್ಟರ್ ಕಿಶನ್ ಕರೆ ನೀಡಿದರು.
ಸಚಿವ ಎಂ ಬಿ ಪಾಟೀಲ್ ಪುತ್ರ, ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಪಾಟೀಲ ಮಾತನಾಡಿ, ಜಗತ್ತಿನ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಈ ಮುಂಚೆ ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ಕೋಟಿ ವೃಕ್ಷ ಅಭಿಯಾನದಿಂದಾಗಿ ಹಸಿರಿನ ಪ್ರಮಾಣ ಹೆಚ್ಚಾಗುತ್ತಿದೆ. ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ನಗರೀಕರಣದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಈಗ ಹಳ್ಳಿಯಲ್ಲಿದ್ದುಕೊಂಡೆ ನಗರದಲ್ಲಿ ಗಳಿಸುವಷ್ಟು ಹಣ ಗಳಿಸಬಹುದು. ಪ್ಯಾಟಿಗಿಂತ ಹಳ್ಳಿ ಜೀವನವೇ ಶ್ರೇಷ್ಠವಾಗಿದೆ. ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಒದಗಿಸಲು ಮುಂದಾಗಬೇಕು. ರೈತರು ಎಲ್ಲರಿಗಿಂತಲೂ ಹೆಚ್ಚು ಶ್ರೇಷ್ಠ ಕಾಯಕಯೋಗಿಯಾಗಿದ್ದಾನೆ ಎಂದು ಹೇಳಿದರು.
ಎಸ್.ಪಿ.ಪಿ.ಎ ಸಂಘಟನೆ ಸ್ಥಾಪಿಸಲು ಕಾರಣ, ಅದರ ಧ್ಯೇಯೋದ್ದೇಶಗಳನ್ನು ವಿವರಿಸಿದ ಅವರು, ಕೊರೊನಾ ಸಂದರ್ಭದಲ್ಲಿ ಸಸಿ ಬೆಳೆಸಿದ್ದೇವೆ, ಬೀದಿ ನಾಯಿಗಳಿಗೆ ಆಹಾರ ನೀಡಿದ್ದೇವೆ. ವಿಶ್ವದ 12 ನಗರಗಳ 6,000 ನಾಯಿಗಳಿಗೆ ಆಹಾರ ಹಾಕಿದ್ದೇವೆ. ಕೋಟಿ ವೃಕ್ಷ ಅಭಿಯಾನ ಮಾಡಿದ್ದೇವೆ. ಪರಿಸರ ಮತ್ತು ಪ್ರಾಣಿಗಳ ಜೊತೆ ಬದುಕಿದರೆ ಜೀವನ್ ಸುಂದರವಾಗಿರುತ್ತದೆ. ಈ ಮುಂಚೆ ಕಬಿನಿ ಅರಣ್ಯದಲ್ಲಿ 10 ವರ್ಷ ಕಾಯ್ದು ಕಪ್ಪು ಚಿರತೆ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ 200 ಕೃಷ್ಣ ಮೃಗಗಳಿವೆ. ಗುಜರಾತ್ ಮತ್ತು ಚೈನಾದಿಂದ ರಾಜಹಂಸ ಪಕ್ಷಿಗಳು ವಿಜಯಪುರ ಜಿಲ್ಲೆಗೆ ಪ್ರತಿ ವರ್ಷ ವಲಸೆ ಬರುತ್ತವೆ. ಆಲಮಟ್ಟಿ ಹಿನ್ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ವಿಜಯಪುರ ಜಿಲ್ಲೆಯಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಾಸ್ಟರ್ ಕಿಶನ್ ಮತ್ತು ಧ್ರುವ ಪಾಟೀಲ, ಜಾಗತಿಕ ತಾಪಮಾನ, ನಗರೀಕರಣ, ಪರಿಸರ ಮಾಲಿನ್ಯಕ್ಕೆ ಕಾರಣಗಳನ್ನು ವಿವರಿಸಿದರು. ಅಲ್ಲದೇ, ಗಿಡ ಕಡಿಯುವುದು ಅನಿವಾರ್ಯವಾದರೆ, ಒಂದು ಗಿಡ ಕಡಿದರೆ ಎರಡು ಗಿಡ ನೆಡಬೇಕು ಎಂದು ಹೇಳಿದರು. ಓಝೋನ್ ಪದರದಲ್ಲಿ ರಂಧ್ರ ಉಂಟಾಗಿದ್ದು, ಗಿಡ, ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಇದರಿಂದಾಗುವ ಹೆಚ್ಚಿನ ಹಾನಿ ತಪ್ಪಿಸಬಹುದು. ಇಲ್ಲದಿದ್ದರೆ ಪ್ರಾಣಿ, ಪಕ್ಷಿಗಳು ಬದುಕುವುದು ಕಷ್ಟ. ಭಾರತದಲ್ಲಿ ಸುಮಾರು 3000 ಚಿರತೆಗಳಿವೆ. ದೇಶದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡು ಬೆಳೆಸಿದಾಗ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ. ಕಾಡಿನಿಂದ ಗಿಡ ಕಡಿಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್.ಪಿ.ಪಿ.ಎ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ ಮಾತನಾಡಿದರು. ಇದೇ ವೇಳೆ, ಎಸ್.ಪಿ.ಪಿ.ಎ ಸಂಘಟನೆಯ ಧ್ಯೇಯೋದ್ದೇಶಗಳು ಮತ್ತು ಸಮಾಜ ಸೇವೆ ಕುರಿತು ಕಿರು ವಿಡಿಯೋ ಪ್ರದರ್ಶನ ಮಾಡಲಾಯಿತು. ಅಲ್ಲದೇ, ಪರಿಸರ ಸಂರಕ್ಷಣೆ, ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು.
ಅರ್ಜುಣಗಿ, ಕಾತ್ರಾಳ, ಹೆಬ್ಬಾಳಟ್ಟಿ, ಯಕ್ಕುಂಡಿ ತೋಟದ ಶಾಲೆ ಸೇರಿದಂತೆ ಎಂಟು ಶಾಲೆಗಳು ಮತ್ತು ಒಂದು ಪಿಯು ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ಎಚ್. ನಾಗೂರ, ವಿಜಯಪುರ ಗ್ರಾಮೀಣ ವಲಯ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ಅರ್ಜುಣಗಿ ಗ್ರಾ.ಪಂ ಅಧ್ಯಕ್ಷ ರಫೀಕ ಸೋನಾರ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ತಂಬಾಕೆ, ಗ್ರಾಮದ ಮುಖಂಡರಾದ ಸುರೇಶ ದೇಸಾಯಿ, ಉಮಾಕಾಂತ ತಡಾಕೆ, ಮಲ್ಲಪ್ಪ ಕೆಂಪವಾಡ, ಅಶೋಕ ಕಾಖಂಡಕಿ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಕ್ಯಾಮರಾ ಟ್ರ್ಯಾಪ್ನಲ್ಲಿ 435 ಹುಲಿಗಳು ಪತ್ತೆ: ಸಚಿವ ಈಶ್ವರ್ ಖಂಡ್ರೆ